ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿಎಲ್ಲ ಪಕ್ಷಗಳು ಸಾಮಾಜಿಕ ಜಾಲತಾಣಗಳನ್ನ ಭರ್ಜರಿಯಾಗಿ ಉಪಯೋಗಿಸಿಕೊಳ್ಳುತ್ತಿವೆ. ಆ ಕೆಲಸವನ್ನ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ವತಿಯಿಂದ ಹಮ್ಮಿಕೊಂಡಿದ್ದ ಟ್ವಿಟ್ಟರ್ ಮೂಲಕ ನೇರ ಸಂವಾದದಲ್ಲಿ ಪಾಲ್ಗೊಂಡು ಮಾಜಿ ಸಿಎಂ ಮಾತನಾಡಿದರು. ಇದೇ ವೇಳೆ ಬಿಜೆಪಿ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷದ ಮೇಲೆ ಜನರು ನಂಬಿಕೆ ಇಟ್ಟಿದ್ದಾರೆ. ಬಡವರ ಪರ ಯೋಜನೆ ಘೋಷಣೆ ಮಾಡಿದಾಗ ಕೆಲವರು ವಿರೋಧ ಮಾಡುತ್ತಾರೆ. ನಾನು ಈ ಹಿಂದೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದಾಗ ಇದೇ ರೀತಿಯ ವಿರೋಧ ವ್ಯಕ್ತವಾಗಿತ್ತು ಎಂದರು.
ಇದೀಗ ಕೇಂದ್ರ ಸರ್ಕಾರ ಮಾಸಿಕ ಆರು ಸಾವಿರ ರೂಪಾಯಿ ದೇಶದ ಐದು ಕೋಟಿ ಕುಟುಂಬಗಳಿಗೆ ನೀಡಲು ಮುಂದಾಗಿದೆ. ಇದು ಅವರಿಗೆ ನೇರವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ. ಆದರೆ ಇದರಿಂದ ಆರ್ಥಿಕ ಭದ್ರತೆ ಕಾಪಾಡಲು ಹೇಗೆ ಸಾಧ್ಯ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ಈ ಹಿಂದೆ ದೇಶದ 25 ಕೋಟಿ ಜನರಿಗೆ ನಾವು ಅನುಕೂಲ ಮಾಡಿಕೊಟ್ಟಿದ್ದೇವೆ, ಈಗಲೂ ಮಾಡುತ್ತಿದ್ದೇವೆ. ಜೇಟ್ಲಿ ಬಡವರ ವಿರೋಧಿ ವರ್ಗಕ್ಕೆ ಸೇರಿದವರು. ಸಂಘ ಪರಿವಾರ ಯುವಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಒಂದು ವರ್ಗವನ್ನು ಓಲೈಸುವ ಕೆಲಸ ಮಾಡುತ್ತಿದೆ ಎಂದು ಹೇಳುತ್ತಿದ್ದಾರೆ. ಆ ರೀತಿಯ ಕೆಲಸ ಮಾಡುತ್ತಿರುವುದು ಬಿಜೆಪಿ ಎಂದರು.
ಆಪರೇಷನ್ ಕಮಲದ ಬಗ್ಗೆ ನಿಮ್ಮ ನಿಲುವು!?
ಆಪರೇಷನ್ ಕಮಲ ಪ್ರಜಾಪ್ರಭುತ್ವಕ್ಕೆ ಮಾರಕ. ಯಡಿಯೂರಪ್ಪ ಅಧಿಕಾರದ ಆಸೆಯಿಂದ ಈ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮೋದಿ ಚೌಕಿದಾರ ಅಲ್ಲ
ನರೇಂದ್ರ ಮೋದಿ ಚೌಕಿದಾರ್ ಅಂತ ಹೇಳುತ್ತಾರೆ. ಅವರಿಗೆ ಇದೆಲ್ಲಾ ಗೊತ್ತಿಲ್ವಾ. ಇದಕ್ಕೆ ಅವರದೂ ಕುಮ್ಮಕ್ಕಿದೆ. ಅಮಿತ್ ಶಾ ಕೂಡ ಆಪರೇಷನ್ ಕಮಲದಲ್ಲಿ ಭಾಗಿಯಾಗಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ಸಾರ್ವಜನಿಕರೇ ಪಾಠ ಕಲಿಸುವ ಕೆಲಸ ಮಾಡಬೇಕು. ಪಕ್ಷಾಂತರ ನಿಷೇಧ ಕಾಯ್ದೆ ತಿದ್ದುಪಡಿ ಮಾಡಬೇಕು. ಯಡಿಯೂರಪ್ಪ ಆಪರೇಷನ್ ಆಡಿಯೋ ತಮ್ಮದೇ ಎಂದು ಹೇಳಿದ್ರೂ ಯಾಕೆ ಕ್ರಮ ಕೈಗೊಂಡಿಲ್ಲ?
ಬಿಜೆಪಿಗೆ ಗೌರವವಿಲ್ಲ
ಸಂವಿಧಾನದ ಬಗ್ಗೆ ಬಿಜೆಪಿಯವರು ಗೌರವ ತೋರುತ್ತಿಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಂದ ರಚಿತವಾದ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ಒದಗಿಸಿದೆ. ಆರ್ಎಎಸ್ಎಸ್ ಸಂಘ ಚಾಲಕರೇ ಸಂವಿಧಾನ ಬದಲಾಯಿಸುವ ಬಗ್ಗೆ ಮಾತನಾಡುತ್ತಾರೆ. ಅನಂತಕುಮಾರ್ ಹೆಗಡೆ ಬಿಜೆಪಿ ಒಪ್ಪಿಗೆ ಇಲ್ಲದೆ ಮಾತನಾಡಿಲ್ಲ.
ನಿಮ್ಮ ಆಡಳಿತ ಅವಧಿಯಲ್ಲಿ ನೆಮ್ಮದಿ ತಂದ ಯೋಜನೆ ಯಾವುದು?
'ಅನ್ನಭಾಗ್ಯ’ಬಡವರಿಗೆ ಎರಡು ಹೊತ್ತು ಊಟ ಕೊಟ್ಟಿದ್ದು. ಹಸಿವುಮುಕ್ತ ರಾಜ್ಯ ಮಾಡಿದ್ದು. ಮಕ್ಕಳಿಗೆ ಬಿಸಿಯೂಟ, ಹಾಲು, ಶೂ ಕೊಟ್ಟು ಸಮಾನತೆ ತರುವ ಪ್ರಯತ್ನ ಮಾಡಿರುವೆ.
ರಾಹುಲ್ ಗಾಂಧಿ-ನರೇಂದ್ರ ಮೋದಿ ನಾಯಕತ್ವದಲ್ಲಿನ ಬದಲಾವಣೆ ಏನು?
ನರೇದ್ರ ಮೋದಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿಲ್ಲ. ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ಪರವಾಗಿ ಇದ್ದಾರೆ. ಅವರು ವಿಕೇಂದ್ರಿಕರಣದ ಬೆಂಬಲವಾಗಿದ್ದಾರೆ. ರಫೇಲ್ ಖರೀದಿ ಬಗ್ಗೆ ಹೆಚ್ಎಎಲ್ಗೆ ಅವಕಾಶ ತಪ್ಪಿಸಿರುವುದು ಯಾಕೆ? ಯುಪಿಎ ಅವಧಿಯಲ್ಲಿ ಆಗಿದ್ದ ಒಪ್ಪಂದವನ್ನು ನರೇಂದ್ರ ಮೋದಿ ಬದಲಾಯಿಸಿದರು. ದೇಶದಲ್ಲಿ ಹೆಚ್ಎಎಲ್ ವಿಮಾನ ತಯಾರಿಸುವ ಏಕೈಕ ಸಂಸ್ಥೆ. ಅವರು 556 ವಿಮಾನಗಳ ಬದಲು 36. ವಿಮಾನಗಳನ್ನು ಮಾತ್ರ ಯಾಕೆ ಖರೀದಿ ಮಾಡಿದ್ದಾರೆ?