ಬೆಂಗಳೂರು: ಕೇಂದ್ರ ಸರ್ಕಾರ ಡಾ. ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಇನ್ನೂ ಸಹ ಅನುಷ್ಠಾನಗೊಳಿಸಿಲ್ಲ. ಮೊದಲು ಈ ವರದಿಯ ಶಿಫಾರಸ್ಸುಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಲು ತಾವುಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರನ್ನು ಒತ್ತಾಯಿಸಿ ಪತ್ರ ಬರೆದಿದ್ದಾರೆ.
ಸುದೀರ್ಘ ಎರಡು ಪುಟಗಳ ಪತ್ರ ಬರೆದಿರುವ ಸಿದ್ದರಾಮಯ್ಯ ಬೀಜ ಮಸೂದೆ ಬಗ್ಗೆ ಸವಿವರವಾದ ಮಾಹಿತಿ ಒದಗಿಸಿದ್ದಾರೆ. ಇದರ ಜೊತೆಗೆ ರೈತರಿಗೆ ಮಾರಕವಾಗಿರುವ 2019 ರ ಬೀಜ ಮಸೂದೆಯು ಕಾಯ್ದೆಯಾಗದಂತೆ ನೋಡಿಕೊಳ್ಳಬೇಕು. ಬೀಜ ಮಸೂದೆಯನ್ನು ಮಂಡಿಸುವ ಮೊದಲು ಸಷ್ಟವಾದ ಬೀಜ, ಕೃಷಿ ನೀತಿಯನ್ನು ರೂಪಿಸಬೇಕು. ಆ ನಿಟ್ಟಿನಲ್ಲಿ ತಾವುಗಳೆಲ್ಲರೂ ಕಾರ್ಯೋನ್ಮುಖರಾಗಬೇಕು. ರಾಜ್ಯದ ರೈತರ ಹಿತಾಸಕ್ತಿಯನ್ನು ರಕ್ಷಿಸಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕೇಂದ್ರದ ಉದ್ದೇಶಿತ ಬೀಜ ಮಸೂದೆಯ ಕುರಿತು ದೇಶದಾದ್ಯಂತ ರೈತ ಸಂಘಟನೆಗಳು, ಪರಿಣಿತರುಗಳು ಚರ್ಚೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಲ್ಲಲ್ಲಿ ಪ್ರತಿಭಟನೆಗಳೂ ನಡೆಯುತ್ತಿವೆ. ಈ ಹಿಂದೆ 2004ರಲ್ಲಿ ಬೀಜ ಮಸೂದೆಯನ್ನು ಸರ್ಕಾರ ಮಂಡಿಸಿದಾಗ ಭಾರಿ ಟೀಕೆಗಳನ್ನು ಎದುರಿಸಿದ ಕಾರಣ, ಅಂದು ಲೋಕಸಭಾ ಸದಸ್ಯರಾಗಿದ್ದ ರಾಮ್ ಗೋಪಾಲ್ ಯಾದವ್ ಅವರ ನೇತೃತ್ವದಲ್ಲಿ ಕೃಷಿ ಸ್ಥಾಯಿ ಸಮಿತಿ ರಚಿಸಲಾಗಿತ್ತು. ಆ ಸ್ಥಾಯಿ ಸಮಿತಿಯು 2006 ರಲ್ಲಿ ತನ್ನ ವರದಿ ಸಲ್ಲಿಸಿತ್ತು. ಅದಾದ 15 ವರ್ಷಗಳ ನಂತರ ರೈತರ ಹಿತದೃಷ್ಟಿಯಿಂದ 2004 ರ ಕಾಯಿದೆಗಿಂತ ಹೆಚ್ಚು ಅಪಾಯಕಾರಿಯಾದ ಬೀಜ ಮಸೂದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿದೆ ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.
ರೈತರು ತಾವು ಬೆಳೆದ ಬೀಜವನ್ನು ಬೇರೆಯವರಿಗೆ ಮಾರಾಟ ಮಾಡಲು ಅಡ್ಡಿಯಾಗಿದ್ದ 2004 ರ ಮಸೂದೆಯಲ್ಲಿನ ಅಂಶವನ್ನು ಸರಿಪಡಿಸುವುದೂ ಸೇರಿದಂತೆ ಹಲವು ಶಿಫಾರಸ್ಸುಗಳನ್ನು ರಾಮ್‌ಗೋಪಾಲ್ ಯಾದವ್ ಅವರ ನೇತೃತ್ವದ ಸ್ಥಾಯಿ ಸಮಿತಿಯು ಮಾಡಿತ್ತು. ಏಪ್ರಿಲ್ 2010 ರಂದು ಅಂದಿನ ಸರ್ಕಾರ ರಾಮ್ ಗೊಪಾಲ್ ಯಾದವ್ ಅಧ್ಯಕತೆಯ ಸ್ಥಾಯಿ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಂಡು ತಿದ್ದುಪಡಿ ತರಲು ಉದ್ದೇಶಿಸಿತ್ತು. ಆದರೆ 2019 ರ ಬೀಜ ಮಸೂದೆಯು ಸದರಿ ಶಿಫಾರಸ್ಸುಗಳಲ್ಲಿನ ಯಾವ ಅಂಶಗಳನ್ನು ಪರಿಗಣಿಸಿದಂತೆ ಕಾಣುತ್ತಿಲ್ಲ. ನೇರವಾಗಿ ಹೇಳಬೇಕೆಂದರೆ, 2019 ರ ಬೀಜ ಮಸೂದೆಯು ಜೀವ ವೈವಿಧ್ಯ ರಕ್ಷಣೆ, ರೈತರ ಹಿತಾಸಕ್ತಿಯನ್ನು ರಕ್ಷಿಸುವುದರ ಪರವಾಗಿಲ್ಲ. ಬದಲಾಗಿ ಖಾಸಗಿ ಬೀಜ ಉತ್ಪಾದಕರಿಗೆ, ಬಹು ರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕಿ ಲಾಭ ತಂದುಕೊಡಲು ಹೊರಟಿರುವಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.
ದೇಶದ ಕೃಷಿ ಸಂಸ್ಕೃತಿಯಲ್ಲಿ ಬೀಜವೆಂಬುದು ಸಮುದಾಯದ ಸ್ವತ್ತು. ಇದನ್ನು ಜೀವ ವೈವಿಧ್ಯ ಕಾನೂನು ಸಹ ಪುರಸ್ಕರಿಸುತ್ತದೆ. ಇವುಗಳನ್ನು ಪರಿಗಣಿಸದ ಈ ಮಸೂದೆಯು ಬೀಜ ನೋಂದಣಿ, ದೃಢೀಕರಣ ಇವುಗಳಿಗೆ ಮಹತ್ವ ನೀಡುತ್ತದೆ. ಇಂಥದ್ದನ್ನು ಆದಿವಾಸಿ, ಅಲೆಮಾರಿ ರೈತರು ಮಾಡಲು ಸಾಧ್ಯವೇ? ಹಾಗಾಗಿ ಇದು ಬೃಹತ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವುದಕ್ಕೆ ಮಾಡಿರುವ ಹುನ್ನಾರದಂತೆ ಕಾಣುತ್ತದೆ ಎಂದು ವಿವರಿಸಿದ್ದಾರೆ.