ಬೆಂಗಳೂರು : ಕೋವಿಡ್ ಚಿಕಿತ್ಸೆ ಪರಿಕರ ಖರೀದಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರ 2200 ಕೋಟಿ ರೂಪಾಯಿ ಲೂಟಿ ಹೊಡೆದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್-19 ವಿವಿಧ ಪರಿಕರ ಖರೀದಿಯ ಮಾರುಕಟ್ಟೆ ಬೆಲೆ 1163.65 ಕೋಟಿ ರೂಪಾಯಿ. ಆದರೆ, ಸರ್ಕಾರ 3,392 ಕೋಟಿ ರೂಪಾಯಿ ಖರ್ಚು ಮಾಡಿ ಪರಿಕರಗಳನ್ನು ಖರೀದಿ ಮಾಡಿದೆ. ಆ ಮೂಲಕ ಸರ್ಕಾರ 2,200 ಕೋಟಿ ರೂಪಾಯಿ ಲಪಟಾಯಿಸಿದೆ. 1000 ವೆಂಟಿಲೇಟರ್ ಖರೀದಿ ಮಾಡಿದ್ದು, ಮಾರುಕಟ್ಟೆ ಬೆಲೆ ಒಂದಕ್ಕೆ 4 ಲಕ್ಷ ರೂಪಾಯಿ.
ಅದರ ಪ್ರಕಾರ ಒಟ್ಟು 40 ಕೋಟಿ ಖರ್ಚಾಗಬೇಕು. ಆದರೆ, ಸರ್ಕಾರ 120 ಕೋಟಿ ರೂಪಾಯಿ ಖರ್ಚು ಮಾಡಿದೆ. 4 ಲಕ್ಷ 89 ಸಾವಿರ ಪಿಪಿಇ ಕಿಟ್ ಖರೀದಿ ಮಾಡಿದೆ. ಅದರ ಮಾರುಕಟ್ಟೆ ಬೆಲೆ ಒಂದಕ್ಕೆ 995 ರೂ.ಆಗುತ್ತದೆ. ಅದರಂತೆ 48.65 ಕೋಟಿ ರೂ. ಖರ್ಚಾಗಬೇಕು. ಆದರೆ, 150 ಕೋಟಿ ರೂ. ಸರ್ಕಾರ ಲೆಕ್ಕ ನೀಡಿ ಖರೀದಿ ಮಾಡಿದೆ ಎಂದು ಆರೋಪಿಸಿದ್ದಾರೆ.
10 ಲಕ್ಷ ಮಾಸ್ಕ್ ಖರೀದಿ ಮಾಡಲಾಗಿದೆ. ಅದರ ಮಾರುಕಟ್ಟೆ ಬೆಲೆ ಒಂದು ಮಾಸ್ಕ್ಗೆ 200 ರೂಪಾಯಿಯಂತೆ ಒಟ್ಟು 20 ಕೋಟಿ ಖರ್ಚಾಗಬೇಕು. ಆದರೆ, ಸರ್ಕಾರ ತೋರಿಸಿರುವ ಲೆಕ್ಕ 40 ಕೋಟಿ ರೂಪಾಯಿ. ಇತ್ತ 10 ಲಕ್ಷ ಸರ್ಜಿಕಲ್ ಗ್ಲೌಸ್ ಮಾರುಕಟ್ಟೆ ಬೆಲೆ ಒಂದಕ್ಕೆ 200 ರೂಪಾಯಿಯಂತೆ 20 ಕೋಟಿ ರೂಪಾಯಿ ತಗುಲಬೇಕಿತ್ತು. ಆದರೆ, ಸರ್ಕಾರ ತೋರಿಸಿದ ಲೆಕ್ಕ 40 ಕೋಟಿ ರೂಪಾಯಿ.
20 ಲಕ್ಷ ಕೋವಿಡ್ ಟೆಸ್ಟ್ ಗ್ಲೌಸ್ ಖರೀದಿ ಮಾಡಲಾಗಿದೆ. ಮಾರುಕಟ್ಟೆ ಬೆಲೆ ಒಟ್ಟು 40 ಕೋಟಿ ರೂಪಾಯಿ. ಆದರೆ, ಸರ್ಕಾರ ತೋರಿಸಿರುವ ಲೆಕ್ಕ 65 ಕೋಟಿ ರೂಪಾಯಿ. ಇನ್ನು 5000 ಆಮ್ಲಜನಕ ಸಿಲಿಂಡರ್ ಖರೀದಿ ಮಾಡಲಾಗಿದ್ದು, ಅದರ ಮಾರುಕಟ್ಟೆ ಬೆಲೆ ಒಂದಕ್ಕೆ 14 ಸಾವಿರ ರೂರೂಪಾಯಂತೆ ಒಟ್ಟು 43 ಕೋಟಿ ರೂಪಾಯಿ ಖರ್ಚಾಗುತ್ತಿತ್ತು. ಆದರೆ, ಸರ್ಕಾರದ ತೋರಿಸಿರುವ ಲೆಕ್ಕ 80 ಕೋಟಿ ರೂಪಾಯಿ.
6.2 ಲಕ್ಷ ಜನರಿಗೆ ಕೋವಿಡ್ 19 ಟೆಸ್ಟ್ ಮಾಡಲಾಗಿದೆ. ಒಬ್ಬರಿಗೆ ತಲಾ 4 ಸಾವಿರ ರೂಪಾಯಿ ಖರ್ಚಾಗಿದೆ. ಅದರಂತೆ ಒಟ್ಟು 248 ಕೋಟಿ ಖರ್ಚಾಗಬೇಕು. ಆದರೆ, ಸರ್ಕಾರ ತೋರಿಸಿರೋದು 530 ಕೋಟಿ ರೂಪಾಯಿ. ಸೋಂಕಿತರ ದಿನದ ಖರ್ಚು 15 ಸಾವಿರ ಜನರಿಗೆ 14 ದಿನದ ಕ್ವಾರಂಟೈನ್‌ಗೆ 100 ಕೋಟಿ ಆಗಬೇಕು. ಆದರೆ, ಸರ್ಕಾರ 525 ಕೋಟಿ ರೂಪಾಯಿ ಖರ್ಚು ಮಾಡಿದೆ. ಹ್ಯಾಂಡ್ ಸ್ಯಾನಿಟೈಸರ್ಗೆ 80 ಕೋಟಿ ಮತ್ತು 10 ಕೋಟಿ ಮೊತ್ತದ ಸೋಪು ಖರೀದಿ ಮಾಡಿದೆ.
ಇತರ ಖರ್ಚು 1732 ಕೋಟಿ ರೂಪಾಯಿ ಎಂದು ಸರ್ಕಾರ ತೋರಿಸಿದೆ. ಒಟ್ಟು ವಿವಿಧ ಪರಿಕರಗಳ ಮಾರುಕಟ್ಟೆ ಬೆಲೆ 1163.65 ಕೋಟಿ ರೂಪಾಯಿ ಆಗಬೇಕಿತ್ತು. ಆದರೆ, ಸರ್ಕಾರ ಒಟ್ಟು 3392 ಕೋಟಿ ರೂಪಾಯಿ ಲೆಕ್ಕ ತೋರಿಸಿದೆ. ಆ ಮೂಲಕ ಸರ್ಕಾರ 2220 ಕೋಟಿ ಮೊತ್ತದ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.