ಬೆಂಗಳೂರು : ರಾಜ್ಯದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿವೆ. ಆದರೂ ದೌರ್ಜನ್ಯಕ್ಕೊಳಗಾಗುವ ಮಹಿಳೆಯರಿಗೆ ಸಮಾಲೋಚನೆ ಸೇರಿ ವಿವಿಧ ರೀತಿಯ ನೆರವು ನೀಡುವ ಸಾಂತ್ವನ ಕೇಂದ್ರಗಳನ್ನು ಆರ್ಥಿಕ ಕೊರತೆಯ ನೆಪವೊಡ್ಡಿ ಸ್ಥಗಿತಗೊಳಿಸಲು ಹೊರಟಿರುವುದು ರಾಜ್ಯ ಸರ್ಕಾರದ ಮಹಿಳಾ ವಿರೋಧಿ ಕ್ರಮವಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಲು ಕೈಗೊಂಡಿರುವ ತೀರ್ಮಾನ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ.
ನೊಂದ ಮತ್ತು ತುರ್ತು ಅಗತ್ಯ ಇರುವ ಮಹಿಳೆಯರಿಗೆ ತಾತ್ಕಾಲಿಕ ಆಶ್ರಯ, ಆರ್ಥಿಕ ನೆರವು, ಶಿಕ್ಷಣ, ಉದ್ಯೋಗ, ಉಚಿತ ಕಾನೂನು ನೆರವು ಸೇರಿ ಹಲವು ರೀತಿಯ ಸಹಾಯ ಒಂದೇ ಸೂರಿನ ಅಡಿಯಲ್ಲಿ ಸಿಗಬೇಕು ಎನ್ನುವ ಕಾಳಜಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಾಂತ್ವನ ಕೇಂದ್ರಗಳನ್ನು ನಿರ್ವಹಿಸಲಾಗುತಿತ್ತು. ಸ್ವಯಂಸೇವಾ ಸಂಸ್ಥೆಗಳ ನೆರವಿನಿಂದ ಈ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದವು.
ಸಾಂತ್ವನ ಕೇಂದ್ರಗಳ ಆಪ್ತ ಸಮಾಲೋಚಕರಿಂದ ಈವರೆಗೂ ಸಹಸ್ರಾರು ಮಹಿಳೆಯರು ಸಾಂತ್ವನ ಮತ್ತು ಭರವಸೆ ಪಡೆದುಕೊಂಡಿದ್ದಾರೆ. ಈ ಕೇಂದ್ರಗಳು ನೊಂದ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಿ ಆತ್ಮಹತ್ಯೆ, ಖಿನ್ನತೆ ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುತ್ತಿದ್ದವು ಎಂದಿದ್ದಾರೆ.
ಈಗ ಕೋವಿಡ್ ನೆಪದಲ್ಲಿ ಆರ್ಥಿಕ ಬಿಕ್ಕಟ್ಟಿನ ಕಾರಣ ಹೇಳಿ 71 ಸಾಂತ್ವನ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ರಾಜಧಾನಿ ಬೆಂಗಳೂರು ಮಹಿಳೆಯರ ಮೇಲೆ ಅತಿ ಹೆಚ್ಚು ದೌರ್ಜನ್ಯ ನಡೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಹೀಗಿದ್ದೂ ಬೆಂಗಳೂರು ನಗರದಲ್ಲಿದ್ದ ಎಲ್ಲಾ ಸಾಂತ್ವನ ಕೇಂದ್ರಗಳನ್ನು ಬಂದ್ ಮಾಡಿರುವುದು ಅಕ್ಷಮ್ಯ.
ಹೀಗಾಗಿ, ಬಂದ್ ಆಗಿರುವ ಸಾಂತ್ವನ ಕೇಂದ್ರಗಳನ್ನು ತಕ್ಷಣ ಆರಂಭಿಸಬೇಕು. ಉಳಿದ ಕೇಂದ್ರಗಳನ್ನು ಬಂದ್ ಮಾಡುವ ನಿರ್ಧಾರವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಕರ್ನಾಟಕ ಕೋವಿಡ್ ರಿಪೋರ್ಟ್ : ಇಂದು 973 ಮಂದಿಗೆ ಕೊರೊನಾ,17 ಸೋಂಕಿತರ ಸಾವು