ಬೆಂಗಳೂರು: ಮಾಜಿ ಸಿಎಂ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಬೆಳಗ್ಗೆ 10 ಗಂಟೆಗೆ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಲಿದ್ದಾರೆ.
ಬೆಂಗಳೂರಿಗೆ ಆಗಮಿಸಿರುವ ಡಿ ಕೆ ಶಿವಕುಮಾರ್ ಅವರನ್ನು ನಿನ್ನೆ ರಾತ್ರಿಯೇ ಭೇಟಿ ಮಾಡಬೇಕಿತ್ತು. ಆದರೆ, ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರಿಂದ ಹಾಗೂ ಡಿಕೆಶಿ ಬಳಲಿರುವ ಹಿನ್ನೆಲೆ ಭೇಟಿಯನ್ನು ಇಂದಿಗೆ ಮುಂದೂಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ಸಿದ್ದರಾಮಯ್ಯನವರ ಭೇಟಿಯ ಬಳಿಕ ಡಿ ಕೆ ಶಿವಕುಮಾರ್ ಅವರು ಬೆಳಗ್ಗೆ 11 ಗಂಟೆಗೆ ಕುಣಿಗಲ್ನ ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿಂದ ಮಧ್ಯಾಹ್ನದ ನಂತರ ತುಮಕೂರಿನ ಶಿರಾದ ಸ್ಫಟಿಕಮಠದಲ್ಲಿ ನಂಜಾವಧೂತ ಶ್ರೀಗಳನ್ನು ಭೇಟಿ ಮಾಡಲಿದ್ದಾರೆ.
ಸಂಜೆ ಬೆಂಗಳೂರಿಗೆ ಆಗಮಿಸಿದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಡಿ ಕೆ ಶಿವಕುಮಾರ್ ತಿಹಾರ್ ಜೈಲಿನಲ್ಲಿದ್ದ ಸಂದರ್ಭ ಅವರ ಭೇಟಿಗೆ ದೇವೇಗೌಡರು ಎರಡು ಬಾರಿ ಪ್ರಯತ್ನಿಸಿದ್ದರು. ಆದರೆ, ಭೇಟಿ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆ ಖುದ್ದು ಶಿವಕುಮಾರ್ ಅವರೇ ದೇವೇಗೌಡರನ್ನು ಭೇಟಿ ಮಾಡಿ ಸಮಾಲೋಚಿಸಲು ತೀರ್ಮಾನಿಸಿದ್ದಾರೆ.