ಬೆಂಗಳೂರು: ಡಿನೋಟಿಫಿಕೇಶನ್ ಪ್ರಕರಣದ ತನಿಖೆಗೆ ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆ ನಿಷ್ಪಕ್ಷಪಾತ ತನಿಖೆಗೆ ಅನುಕೂಲ ಮಾಡಿಕೊಡಲು ಸಿಎಂ ಸ್ಥಾನಕ್ಕೆ ಯಡಿಯೂರಪ್ಪನವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಲೋಕಾಯುಕ್ತದ ನಿಗಾದಲ್ಲಿ ತನಿಖೆ ನಡೆಯಬೇಕು ಎಂದು ಹೈಕೋರ್ಟ್ ಹೇಳಿದೆ. ಎಲ್ಲಾ ಏಜೆನ್ಸಿಗಳು ಯಾರ ಅಂಡರ್ನಲ್ಲಿ ಇರುತ್ತವೆ? ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯುವಂತಿಲ್ಲ. ಪ್ರಕರಣದಲ್ಲಿ ಸಿಎಂ ಇರುವುದರಿಂದ ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ನಿಷ್ಪಕ್ಷಪಾತ ತನಿಖೆಯಾಗಲು ಸಾಧ್ಯವಿಲ್ಲ. ಆದ್ದರಿಂದ ಸಿಎಂ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆರೋಪದಿಂದ ಮುಕ್ತರಾಗಿ ಬಂದು ಸಿಎಂ ಆಗಿ ಮುಂದುವರೆಯಲಿ, ನಮ್ಮ ತಕರಾರಿಲ್ಲ ಎಂದರು.
ಕಾನೂನು ಬಗ್ಗೆ ಗೌರವ ಇದ್ದರೆ ಯಡಿಯೂರಪ್ಪ ಕೂಡಲೇ ರಾಜೀನಾಮೆ ನೀಡಲಿ. ಒಂದು ಸೆಕೆಂಡ್ ಕೂಡ ಸಿಎಂ ಆಗಿ ಅವರು ಮುಂದುವರೆಯಬಾರದು. ಭಂಡತನದಿಂದ ರಾಜೀನಾಮೆ ನೀಡದಿದ್ರೆ ಹೈಕಮಾಂಡ್ ಕ್ರಮ ತೆಗೆದುಕೊಳ್ಳಬೇಕು. ಚೌಕಿದಾರ್ ಅವರು ಯಡಿಯೂರಪ್ಪ ಮೇಲೆ ಕ್ರಮ ಜರುಗಿಸಬೇಕು ಎಂದು ಪ್ರಧಾನಿ ಮೋದಿಯ ಹೆಸರು ಉಲ್ಲೇಖಿಸದೆ ಪರೋಕ್ಷವಾಗಿ ಟಾಂಗ್ ನೀಡಿದರು.
ಇದನ್ನೂ ಓದಿ : ಸಿಎಂ ಬಿಎಸ್ವೈಗೆ ಸಂಕಷ್ಟ: ಅಕ್ರಮ ಡಿನೋಟಿಫಿಕೇಷನ್ ಪ್ರಕರಣ ರದ್ದುಪಡಿಸಲು ನಿರಾಕರಿಸಿದ ಹೈಕೋರ್ಟ್
ಒಂದು ವೇಳೆ ಸಿಎಂ ಯಡಿಯೂರಪ್ಪ ಭಂಡತನಕ್ಕೆ ಇಳಿದ್ರೆ ನಾವೂ ಬೀದಿಗಿಳಿದು ಪ್ರತಿಭಟನೆ ಮಾಡುತ್ತೇವೆ. ಯಡಿಯೂರಪ್ಪನವರಿಗೆ ಮಾನ ಮರ್ಯಾದೆ ಇದ್ರೆ ರಾಜೀನಾಮೆ ಕೊಡಲಿ. ಇಲ್ಲದಿದ್ದರೆ ಯಾವ ರೀತಿ ಹೋರಾಟ ಮಾಡ್ಬೇಕು ಎಂದು ಪಕ್ಷದಲ್ಲಿ ತೀರ್ಮಾನ ಮಾಡ್ತೀವಿ. ಈ ಕೇಸ್ನಲ್ಲಿ ವಾರೆಂಟ್ ಕೊಡಬಹುದು ಅಥವಾ ಬಂಧಿಸಬಹುದು ಎಂದು ಅಭಿಪ್ರಾಯಪಟ್ಟರು.
ಪ್ರಕರಣದ ವಿವರ: 2000-2001ರಲ್ಲಿ ಬೆಳ್ಳಂದೂರು, ದೇವರಬಿಸನಹಳ್ಳಿ, ವರ್ತೂರು, ವೈಟ್ ಫೀಲ್ಡ್ ಸುತ್ತಮುತ್ತಲಿನ ಸುಮಾರು 500 ಎಕರೆ ಭೂಮಿಯಲ್ಲಿ ಐಟಿ ಕಾರಿಡಾರ್ ನಿರ್ಮಾಣಕ್ಕೆ ಸರ್ಕಾರ ಘೋಷಿಸಿತ್ತು. ಕೆಐಡಿಬಿ ಭೂ ಸ್ವಾಧೀನಕ್ಕೆ ಅಧಿಸೂಚನೆಯನ್ನೂ ಹೊರಡಿಸಿತ್ತು. ಕೆಐಡಿಬಿ ಅಧಿಸೂಚನೆ ಹೊರಡಿಸಿದ ಬಳಿಕ ಈ ಪೈಕಿ ಒಂದಿಷ್ಟು ಜಾಗವನ್ನು 2006ರಲ್ಲಿ (ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ) ಡೀನೋಟಿಫೈ ಮಾಡಲಾಗಿದೆ. ಪ್ರಿಲಿಮಿನರಿ ನೋಟಿಫಿಕೇಶನ್ಗೂ ಮುನ್ನ ಡಿನೋಟಿಫಿಕೇಶನ್ ಮಾಡಲು ಅವಕಾಶ ಇದೆ. ಆದರೆ, ಕೆಐಎಡಿಬಿ ಸ್ವಾಧೀನಕ್ಕೆ ತೆಗೆದುಕೊಂಡ ಮೇಲೆ ಮಾಡಿದರೆ ಅಕ್ರಮ ಆಗುತ್ತದೆ. ಇಲ್ಲಿ ಸಿಎಂ ಮೇಲೆ ಕೆಐಡಿಬಿ ಸ್ವಾಧೀನ ಮಾಡಿಕೊಂಡ ಮೇಲೆ ಡಿನೋಟಿಫಿಕೇಶನ್ ಮಾಡಿದ ಆರೋಪವಿದೆ. ಈ ಸಂಬಂಧ ವಾಸುದೇವರೆಡ್ಡಿ ಎಂಬುವರು ದೂರು ದಾಖಲಿಸಿದ್ದರು.