ಬೆಂಗಳೂರು : ಕೊರೊನಾ ಎರಡನೇ ಅಲೆ ಪರಿಣಾಮವನ್ನು ನಿಯಂತ್ರಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಆಕ್ರೋಶ ಹೊರ ಹಾಕಿರುವ ಅವರು, ಕೋವಿಡ್-19 ಎರಡನೇ ಅಲೆ ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದುರ್ಬಲವಾದ ಸಾರ್ವಜನಿಕ ಆರೈಕೆ, ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ. ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದು ಸರ್ಕಾರದ ದೌರ್ಬಲ್ಯ ಎತ್ತಿ ತೋರಿಸುತ್ತಿದೆ ಎಂದಿದ್ದಾರೆ.
ಕೋವಿಡ್-19ಗೆ ಯಾವುದೇ ವೈದ್ಯಕೀಯ ಚಿಕಿತ್ಸೆ ಇಲ್ಲದೆ ಜನ ಅಸಹಾಯಕರಾಗಿದ್ದಾರೆ. 1ನೇ ಅಲೆ ಸಂದರ್ಭ ಭಾರತಕ್ಕೆ ಸಾಕಷ್ಟು ಗಂಭೀರ ಅನುಭವಗಳು ಆದವು. ಆದರೂ ಸರ್ಕಾರ ಯಾವುದೇ ಪಾಠ ಕಲಿತಿಲ್ಲ. ಕೋವಿಡ್ ಚಿಕಿತ್ಸೆಗೆ ವ್ಯಾಪಕವಾಗಿ ಬಳಸಲಾಗುವ ಪರಿಹಾರಗಳು ಲಭ್ಯವಿಲ್ಲ. ಸರ್ಕಾರ ಔಷಧಿಗಳನ್ನು ಹೇಗೆ ಸೂಕ್ತ ಪ್ರಮಾಣದಲ್ಲಿ ಸಿದ್ಧಪಡಿಸುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಕೋವಿಡ್ ರೋಗಿಗಳಿಗೆ ಸಾಮಾನ್ಯ ಮತ್ತು ಐಸಿಯು ಹಾಸಿಗೆಗಳ ಕೊರತೆಯೂ ಇದೆ. ಆಮ್ಲಜನಕ ಮತ್ತು ಇತರ ಬೆಂಬಲ ವ್ಯವಸ್ಥೆಗಳಿಲ್ಲದೆ ಜನರು ಬಳಲುತ್ತಿದ್ದಾರೆ. ಸಾರ್ವಜನಿಕ ಆರೋಗ್ಯದ ಬಿಕ್ಕಟ್ಟನ್ನು ಪರಿಹರಿಸುವ ಬದಲು ರಾಜ್ಯ ಸರ್ಕಾರ ತನ್ನ ಆಂತರಿಕ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ನಿರತವಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ: ಕೋವಿಡ್ ಕೇರ್ ಸೆಂಟರ್ ಆಗಿ ಕೋರಮಂಗಲದ ಇನ್ಡೋರ್ ಸ್ಟೇಡಿಯಂ ರೆಡಿ
ಸರ್ಕಾರಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿರುವುದರಿಂದ, ಜನರು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳತ್ತ ಸಾಗುತ್ತಿದ್ದಾರೆ. ಖಾಸಗಿ ಆಸ್ಪತ್ರೆಯ ಶುಲ್ಕ ಭರಿಸಲು ಅನೇಕರಿಗೆ ಸಾಧ್ಯವಾಗುತ್ತಿಲ್ಲ.
ಖಾಸಗಿ ಆಸ್ಪತ್ರೆಗಳಿಗೆ ಉಲ್ಲೇಖಿಸಲಾದ ಎಲ್ಲಾ ರೋಗಿಗಳಿಗೆ ಕೋವಿಡ್-19 ಚಿಕಿತ್ಸೆಯನ್ನು ಉಚಿತವಾಗಿ ಒದಗಿಸುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವರನ್ನು ನಾನು ಕೋರುತ್ತೇನೆ ಎಂದಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರಗಳು ಹಾಗೂ ನಾಯಕರು ಚುನಾವಣೆಯ ಬಗ್ಗೆ ಮಾತ್ರ ಚಿಂತೆ ಮಾಡುತ್ತಿದ್ದಾರೆ. ಈ ಚಿಂತೆಯನ್ನು ಆಡಳಿತದ ಬಗ್ಗೆ ನೀಡುತ್ತಿಲ್ಲ. ರಾಜ್ಯ ಬಿಜೆಪಿ ನಾಯಕರು ಸಾರ್ವಜನಿಕರಿಗೆ ಬೋಧಿಸಲು ಪ್ರಯತ್ನಿಸುತ್ತಿರುವ ಪ್ರೋಟೋಕಾಲ್‌ಗಳನ್ನು ಏಕೆ ಅನುಸರಿಸುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.