ಬೆಂಗಳೂರು : ಕೃಷಿ ಕ್ಷೇತ್ರಕ್ಕೆ ಮಾರಕವಾದ ಕಾಯಿದೆಗಳನ್ನು ವಾಪಸ್ ಪಡೆಯದಿದ್ದರೆ ರೈತರು ದಂಗೆ ಏಳುವುದು ಖಚಿತ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ರೈತ ವಿರೋಧಿ ಕಾಯಿದೆಗಳನ್ನು ಜಾರಿಗೆ ತಂದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಮುಂಬರುವ ಚುನಾವಣೆಯಲ್ಲಿ ಜನತೆ ಮನೆಗೆ ಕಳುಹಿಸುವುದು ಖಚಿತ ಎಂದರು.
ದೇಶದ ಜನತೆ ಎಂದೂ ಅನುಭವಿಸದ ಕಷ್ಟಗಳನ್ನು ಇದೀಗ ಅನುಭವಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯಿದೆಗಳು ನಮಗೆ ಬೇಡ. ಅದರಿಂದ ನಮಗೆ ಅನುಕೂಲ ಇಲ್ಲ ಎಂದು ಜನತೆ ಒಕ್ಕೊರಲಿನಿಂದ ಹೇಳುತ್ತಿದ್ದಾರೆ ಎಂದರು.
ಕಳೆದ 58 ದಿನಗಳಿಂದ ರೈತರು ದೆಹಲಿಯಲ್ಲಿ ಹಗಲು, ರಾತ್ರಿ ಎನ್ನದೆ ಚಳಿ-ಗಾಳಿ, ಮಳೆ-ಬಿಸಿಲು ಲೆಕ್ಕಿಸದೆ ಚಳವಳಿ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಮನುಷ್ಯತ್ವವಿದ್ರೆ ಅವರ ಚಳವಳಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದಿತ್ತು.
ಹತ್ತು ಬಾರಿ ರೈತರ ಜೊತೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿದೆ. ಆದರೆ, ಈವರೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿಲ್ಲ. ಕೇಂದ್ರದ ಹಠಮಾರಿ ಧೋರಣೆ ಇದಕ್ಕೆ ಕಾರಣ ಎಂದರು.
ಸುಪ್ರೀಂಕೋರ್ಟ್ ಮೂರು ಕಾಯಿದೆಗಳಿಗೆ ತಡೆ ಆದೇಶ ನೀಡಿದೆ. ಕಾಯಿದೆಗಳು ಸಂವಿಧಾನಬದ್ಧವಾಗಿ ಇದ್ದಿದ್ದರೆ ನ್ಯಾಯಾಲಯ ತಡೆಯಾಜ್ಞೆ ನೀಡುತ್ತಿರಲಿಲ್ಲ. ರೈತರು ದಂಗೆ ಏಳಲು ಅವಕಾಶ ಮಾಡಿ ಕೊಡಬೇಡಿ ಎಂದು ನಾನು ಸೂಚ್ಯವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೇಳಲು ಬಯಸುತ್ತೇನೆ.
ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಈ ಹಿಂದೆ ದೇಶದ ಜನತೆ ದಂಗೆ ಎದ್ದಿದ್ದರು. ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಎರಡನೇ ಸ್ವಾತಂತ್ರ್ಯ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ ಎಂದರು. ಈ ಕಾನೂನುಗಳಿಂದ ಎಂಎಸ್‍ಪಿ ನಿಂತು ಹೋಗಲಿದೆ.
ಕೃಷಿ ಮಾರುಕಟ್ಟೆಗಳು ನಾಶವಾಗಲಿವೆ. ಅದಾನಿ, ಅಂಬಾನಿಯಂತಹ ಬಂಡವಾಳಶಾಹಿಗಳಿಗೆ ಮಣಿದು, ಅವರಿಗೆ ಗುಲಾಮರಾಗಿ ಕೇಂದ್ರ ಸರ್ಕಾರ ನಡೆಸುವವರು ಈ ಕಾಯಿದೆಗಳನ್ನು ಜಾರಿಗೆ ತಂದಿದ್ದಾರೆ, ಇದನ್ನು ವಿರೋಧಿಸಬೇಕಿದೆ ಎಂದರು.
ಇದನ್ನೂ ಓದಿ: ಗೋಹತ್ಯೆ ನಿಷೇಧ ಸುಗ್ರೀವಾಜ್ಞೆ.. ನಿಯಮಗಳನ್ನು ರೂಪಿಸುವವರೆಗೆ ಕಠಿಣ ಕ್ರಮವಿಲ್ಲವೆಂದ ಸರ್ಕಾರ