ಬೆಂಗಳೂರು : ದೇಶ ಕೊರೊನಾ ಅಟ್ಟಹಾಸದಿಂದ ನಲುಗಿರುವ ಸಂದರ್ಭ, ಬಿಜೆಪಿ ಪಕ್ಷ ತನ್ನ ಕುತಂತ್ರ ರಾಜಕೀಯ ಬುದ್ಧಯನ್ನು ತೋರಿಸಿ ರಾಜಸ್ಥಾನ ಸರ್ಕಾರವನ್ನು ಕೆಡವಲು ಮುಂದಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ವಿಶ್ವವೇ ಕೊರೊನಾ ಮಹಾಮಾರಿಯಿಂದ ಕಂಗೆಟ್ಟಿದ್ದು, ಭಾರತ ದೇಶ ಸಹ ಇದರ ಆತಂಕದಿಂದ ದೂರವಾಗಿಲ್ಲ. ರೋಗ ನಿಯಂತ್ರಣಕ್ಕೆ ಹೋರಾಟ ನಡೆಸುತ್ತಿದೆ. ದೇಶ ಎರಡು ಸಮಸ್ಯೆಗಳ ವಿರುದ್ಧ ಏಕಕಾಲಕ್ಕೆ ಹೋರಾಟ ನಡೆಸುತ್ತಿದೆ. ಒಂದು ಕೋವಿಡ್-19 ಹಾಗೂ ಇನ್ನೊಂದು ಭಾರತೀಯ ಜನತಾಪಕ್ಷದ ಪ್ರಜಾಪ್ರಭುತ್ವ ವಿರೋಧಿ ನೀತಿ ವಿರುದ್ಧ ಎಂದಿದ್ದಾರೆ.
2014ರಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಅವರು, ದೇಶದ ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿ ಸ್ಥಿರವಾಗಿದ್ದ ಬಿಜೆಪಿಯೇತರ ಪಕ್ಷದ ಸರ್ಕಾರವನ್ನು ಅಸ್ಥಿರಗೊಳಿಸುತ್ತಾ ಬಂದಿದೆ. ಹಣ, ತೋಳ್ಬಲ ಹಾಗೂ ಇತರೆ ಬಲ ಬಳಸಿಕೊಂಡಿದೆ. ಇವರು ಈ ಕೋವಿಡ್ ಆತಂಕದ ಸಂದರ್ಭದಲ್ಲಿಯೂ ತಮ್ಮ ಸ್ವಾತಂತ್ರ್ಯವನ್ನು ಸಾಯಿಸುವ ಕಾರ್ಯವನ್ನು ನಿಲ್ಲಿಸಿಲ್ಲ ಎಂದಿದ್ದಾರೆ.
ಮಧ್ಯಪ್ರದೇಶ ಸರ್ಕಾರವನ್ನು ಆರೋಗ್ಯ ತುರ್ತು ಪರಿಸ್ಥಿತಿ ಇದ್ದ ಸಂದರ್ಭ ಬೀಳಿಸಲಾಗಿತ್ತು. ಇದೀಗ ಜನ ಕೊರೊನಾದಿಂದ ಮತ್ತು ಹಸಿವಿನಿಂದ ಸಾಯುತ್ತಿದ್ದಾರೆ. ಈ ಸಂದರ್ಭ ಸ್ಥಿರವಾಗಿದ್ದ ರಾಜಸ್ಥಾನ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಪಕ್ಷವನ್ನು ಈ ಸಂದರ್ಭ ಆಗ್ರಹಿಸುವುದೆಂದ್ರೆ, ಸ್ಥಿರ ಸರ್ಕಾರವನ್ನು ಬೀಳಿಸುವ ಯತ್ನ ಮಾಡಬೇಡಿ, ಕೂಡಲೇ ವಿಧಾನಸಭೆ ಅಧಿವೇಶನ ಕರೆಯಿರಿ ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.