ಬೆಂಗಳೂರು: ನಿರುದ್ಯೋಗ, ಸರ್ಕಾರಿ ನೇಮಕಾತಿಗಳಲ್ಲಿ ಭ್ರಷ್ಟಾಚಾರ, ಶಿಕ್ಷಣ ಕ್ಷೇತ್ರದ ನಿರ್ಲಕ್ಷ್ಯ ಮತ್ತು ಕೋಮುಗಲಭೆಗಳಿಗೆ ರಾಜ್ಯ ಬಲಿಯಾಗುತ್ತಿದೆ. ಇಂಥ ಸಂದರ್ಭದಲ್ಲಿ ಯುವ ಸಮುದಾಯವನ್ನು ಅಣಕಿಸುವಂತೆ ರಾಷ್ಟ್ರೀಯ ಯುವಜನೋತ್ಸವವನ್ನು ಉದ್ಘಾಟಿಸಲು ಮೋದಿ ರಾಜ್ಯಕ್ಕೆ ಆಗಮಿಸುತ್ತಿದ್ದು, ಅವರಿಗೆ ಸ್ವಾಗತ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.
ಸಣ್ಣ ಕೈಗಾರಿಕೆಗಳು ಮುಚ್ಚಿ ಹೋಗುತ್ತಿವೆ: ಕರ್ನಾಟಕದಲ್ಲಿ ಪ್ರಸ್ತುತ 25 ಲಕ್ಷಕ್ಕೂ ಹೆಚ್ಚು ನಿರುದ್ಯೋಗಿಗಳಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ 2.52 ಲಕ್ಷ ಉದ್ಯೋಗಗಳು ಖಾಲಿ ಬಿದ್ದಿವೆ. ಸರ್ಕಾರಿ ಶಾಲೆಗಳು ಮತ್ತು ಪಿಯು ಕಾಲೇಜುಗಳಲ್ಲಿ 53,700 ಹುದ್ದೆಗಳು ಭರ್ತಿಯಾಗಿಲ್ಲ. ಸಣ್ಣ ಕೈಗಾರಿಗಳು ಮುಚ್ಚಿಹೋದ ಕಾರಣ 83,190 ಪುರುಷರು ಮತ್ತು ಮಹಿಳೆಯರು ನಿರುದ್ಯೋಗಿಗಳಾಗಿದ್ದಾರೆ. ಈ ಸ್ಥಿತಿಯಲ್ಲಿ ಮೋದಿಯವರು ಯಾವ ಮುಖ ಹೊತ್ತು ಯುವಜನೋತ್ಸವ ಉದ್ಘಾಟಿಸಲು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ? ಅವರು ಉದ್ಘಾಟಿಸುತ್ತಿರುವುದು ಯುವಜನೋತ್ಸವವೇ? ಯುವಜನ ವಿನಾಶೋತ್ಸವವೇ?.
ನಿರುದ್ಯೋಗದಿಂದ ಆತ್ಮಹತ್ಯೆ ಹೆಚ್ತಿದೆ: ಪಿಎಸ್ಐ ನೇಮಕಾತಿ ಹಗರಣಕ್ಕೆ 1.29 ಲಕ್ಷ ಯುವಜನರು ಬಲಿಯಾಗಿದ್ದಾರೆ. ಎಇ ಮತ್ತು ಜೆಇ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳಿಂದಲೂ 50-80 ಲಕ್ಷ ರೂ ಸುಲಿಗೆ ಮಾಡಲಾಗಿದೆ. ರೈಲ್ವೆಯ ಭ್ರಷ್ಟ ಅಧಿಕಾರಿಗಳು ನೇಮಕಾತಿಯ ಸುಳ್ಳು ಭರವಸೆ ನೀಡಿ 22 ಕೋಟಿ ರೂ ಲೂಟಿ ಮಾಡಿದ್ದಾರೆ. ನಿರುದ್ಯೋಗದಿಂದ ಬೇಸತ್ತು ರಾಜ್ಯದಲ್ಲಿ 1,129 ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಅವರ ಸಹದ್ಯೋಗಿಗಳು ಆಗಾಗ ಗೊಣಗಾಡುತ್ತಿರುವ ಗುಜರಾತ್ ಮಾದರಿ ಎಂದರೆ ಇದೇ ಆಗಿರಬಹುದು.
ಕನ್ನಡಿಗರು ಉದ್ಯೋಗದಿಂದ ವಂಚಿತ: ಕೇಂದ್ರ ಮತ್ತು ರಾಜ್ಯದ ಡಬಲ್ ಎಂಜಿನ್ ಸರ್ಕಾರ ಬಹಳ ಮುಖ್ಯವಾಗಿ ಕನ್ನಡಿಗ ಯುವಜನರಿಗೆ ಮಾಡಿರುವ ದ್ರೋಹವನ್ನು ಇತಿಹಾಸ ಮರೆಯದು. ಪ್ರಾದೇಶಿಕ ಭಾಷೆಯಲ್ಲಿ ಕೇಂದ್ರ ನೇಮಕಾತಿ ಪರೀಕ್ಷೆಯನ್ನು ನಡೆಸಲು ನಿರಾಕರಿಸುವ ಮೂಲಕ ಕನ್ನಡಿಗ ಯುವಜನರನ್ನು ಹುಟ್ಟಿದ ನಾಡಿನಲ್ಲಿಯೇ ಅನಾಥರನ್ನಾಗಿ ಮಾಡಿದೆ. ಗ್ರಾಮೀಣ ಬ್ಯಾಂಕಿಂಗ್ ಪರೀಕ್ಷೆಯನ್ನು ಕೂಡಾ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಬರೆಯಬೇಕಾಗಿರುವ ಕಾರಣ ಈ ಬ್ಯಾಂಕ್ಗಳಲ್ಲಿ ಕೇವಲ ಶೇಕಡಾ 6ರಷ್ಟು ಮಾತ್ರ ಕನ್ನಡಿಗ ಉದ್ಯೋಗಿಗಳಿದ್ದಾರೆ. ಸಂವಿಧಾನ ಎಲ್ಲ ಭಾರತೀಯ ಭಾಷೆಗಳಿಗೆ ಮಾನ್ಯತೆ ನೀಡಿದ್ದರೂ ಐಬಿಪಿಎಸ್ ಪರೀಕ್ಷೆಗಳೂ ಸೇರಿದಂತೆ ಕೇಂದ್ರ ಸ್ವಾಮ್ಯದ ಯಾವ ಸಂಸ್ಥೆಗಳಲ್ಲಿಯೂ ಕನ್ನಡದಲ್ಲಿ ಪರೀಕ್ಷೆ ಬರೆಯುವಂತಿಲ್ಲ. ಇದರಿಂದಾಗಿ ಸಾವಿರಾರು ಕನ್ನಡಿಗರು ಕನ್ನಡದ ನೆಲದಲ್ಲಿಯೇ ಉದ್ಯೋಗ ವಂಚಿತರಾಗುತ್ತಿದ್ದಾರೆ. ಕಾವೇರಿ ಮತ್ತು ಗಂಗೆಯಲ್ಲಿ ನೂರು ಬಾರಿ ಮುಳುಗಿ ಎದ್ದರೂ ನೊಂದ ಯುವ ಕನ್ನಡಿಗರ ಶಾಪದಿಂದ ಬಿಜೆಪಿ ನಾಯಕರಿಗೆ ಮುಕ್ತಿ ಸಿಗಲಾರದು ಕಿಡಿಕಾರಿದ್ದಾರೆ.
ಶಿಕ್ಷಣಕ್ಕೆ ಅನುದಾನ ಏರಿಸುತ್ತಿಲ್ಲ: ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಪಠ್ಯಪುಸ್ತಕ ಮತ್ತು ಪಠ್ಯೇತರ ಚಟುವಟಿಕೆಗಳ ಕೇಸರೀಕರಣಗೊಳಿಸಲು ಆದ್ಯತೆ ನೀಡುತ್ತಿದೆಯೇ ಹೊರತು ಶೈಕ್ಷಣಿಕ ಮೂಲಸೌಕರ್ಯಗಳ ಅಭಿವೃದ್ಧಿಗೆ ಗಮನ ನೀಡುತ್ತಿಲ್ಲ. ಕಳೆದ ಮೂರು ಬಜೆಟ್ಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗುವ ಅನುದಾನ ಶೇಕಡಾ 1.97ಕ್ಕಿಂತ ಮೇಲೆ ಏರಿಲ್ಲ. 2022ರ ಸಿಎಜಿ ವರದಿ ಪ್ರಕಾರ 2022ರಲ್ಲಿ 1.62 ಲಕ್ಷ ವಿದ್ಯಾರ್ಥಿಗಳು ಶಾಲೆಗಳನ್ನು ತ್ಯಜಿಸಿದ್ದಾರೆ. 2020-21 ಮತ್ತು 2021-22ರ ಅವಧಿಯಲ್ಲಿ 1965 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ.
ಯುವಜನರಿಗೆ ಶಿಕ್ಷಣ ನೀಡಿ ಸ್ವಾವಲಂಬಿಗಳನ್ನಾಗಿ ಮಾಡಿ ರಾಷ್ಟ್ರನಿರ್ಮಾಣಕ್ಕೆ ಯುವಶಕ್ತಿಯನ್ನು ಬಳಸಬೇಕಾಗಿದ್ದ ಸರ್ಕಾರ ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ ತಮ್ಮ ರಾಜಕೀಯ ಲಾಭಕ್ಕಾಗಿ ಕೋಮುವಾದಿ ಚಟುವಟಿಕೆಗಳಿಗೆ ಕಾಲಾಳುಗಳಾಗಿ ಬಳಸಿಕೊಳ್ಳಲು ಹೊರಟಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ 163 ಯುವಕರು ಕೋಮು ಗಲಭೆಗಳಲ್ಲಿ ಮೃತರಾಗಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ 4,600 ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನವನ್ನು ರದ್ದುಗೊಳಿಸುವ ಮೂಲಕ ಈ ಸಮುದಾಯದ ವಿದ್ಯಾರ್ಥಿಗಳು ಅರ್ಧದಲ್ಲಿಯೇ ಶಿಕ್ಷಣ ಮೊಟಕುಗೊಳಿಸುವಂತಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಜನರಿಗೆ ವಿಶೇಷ ನೇಮಕಾತಿ ಯೋಜನೆ ಮೂಲಕ ಉದ್ಯೋಗ ನೀಡಲಾಗುವುದು ಎಂಬ ಬಿಜೆಪಿಯ ಭರವಸೆ ಹುಸಿಯಾಗಿ ಹೋಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಾಳೆ ಒಂದು ದಿನ ಹುಬ್ಬಳ್ಳಿ ನಗರದ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ: ಡಿ ಸಿ ಗುರುದತ್ತ ಹೆಗಡೆ