ಬೆಂಗಳೂರು: ಹಿಂದೆ ಸಿದ್ದರಾಮಯ್ಯ ಮೋದಿಗೆ 58 ಇಂಚು ಎದೆ ಇದ್ರೆ ಸಾಲದು ಮಾನವೀಯತೆ ಇರಬೇಕು ಅಂದಿದ್ದರು. ಈಗ ಐಎಂಎನಿಂದ ಕೋಟ್ಯಂತರ ರೂಪಾಯಿ ವಂಚನೆಯಾಗಿದ್ದು ಸಿದ್ದರಾಮಯ್ಯನವರ ಮಾನವೀಯತೆ ಎಲ್ಲಿ ಹೋಯ್ತು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸಚಿವ ಜಮೀರ್ ಮತ್ತು ರೋಷನ್ ಬೇಗ್ ನಡುವೆ ಕಿತ್ತಾಟದಿಂದ ಸರ್ಕಾರಕ್ಕಾಗಲೀ, ತನಿಖೆಗಾಗಲೀ ಅನುಕೂಲ ಆಗಲ್ಲ. ಐಎಂಎ ವಂಚನೆ ಪ್ರಕರಣದಲ್ಲಿ ಸಿದ್ದರಾಮಯ್ಯ ಯಾಕೆ ಮೌನವಾಗಿದ್ದಾರೆ? ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸಿದ್ದರಾಮಯ್ಯ ಯಾಕೆ ಸಲಹೆ ಕೊಡ್ತಿಲ್ಲ? ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣವನ್ನು ಸರ್ಕಾರ ಸಿಬಿಐ ತನಿಖೆಗೆ ವಹಿಸಲಿ. ಇದನ್ನು ಸಿಎಂಗೆ ಸಿದ್ದರಾಮಯ್ಯ ಅವರೇ ಮನವರಿಕೆ ಮಾಡಿಸಲಿ ಎಂದು ಆಗ್ರಹಿಸಿದರು.
ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣದಲ್ಲಿ ದೂರುದಾರರ ಸಂಖ್ಯೆ15 ಸಾವಿರ ದಾಟಿದ್ದರೂ ಸರ್ಕಾರ ಪ್ರಕರಣದ ಕುರಿತು ನಿರ್ಲಿಪ್ತವಾಗಿದೆ ಎಂದು ಪೂಜಾರಿ ಆರೋಪಿಸಿದರು. ವಂಚನೆಯ ರೂವಾರಿ ಮನ್ಸೂರ್ ಖಾನ್ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದವರು, ಸಿಎಂ ಸೇರಿ ಸಚಿವ ಸಂಪುಟದಲ್ಲಿ ಇರುವವರಿಗೆ ಪರಿಚಯಸ್ಥರು. ನಿಮ್ಮದೇ ಸಚಿವರೊಬ್ಬರು ಚುನಾವಣಾ ಅಫಿಡವಿಟ್ ನಲ್ಲಿ ಐದು ಕೋಟಿ ಸಾಲವನ್ನು ಮನ್ಸೂರ್ ಕಡೆಯಿಂದ ಪಡೆದ ಬಗ್ಗೆ ಉಲ್ಲೇಖಿಸಿದ್ದಾರೆ. ನೀವೂ ಸಹ ಮನ್ಸೂರ್ ಖಾನ್ ಜೊತೆ ಭೋಜನ ಸ್ವೀಕರಿಸಿದ್ದೀರಿ. ಧರ್ಮದ ನೆಪವೊಡ್ಡಿ ಮನ್ಸೂರ್ ಸಾಮಾನ್ಯ ಜನರಿಗೆ ವಂಚನೆ ಎಸಗಿದ್ದಾನೆ. ಆತನ ಪತ್ತೆಗೆ ವಿಳಂಬ ಮಾಡುತ್ತಿದ್ದೀರಿ. ಮನ್ಸೂರ್ ಮತ್ತು ಆತನ ಸಂಪರ್ಕದಲ್ಲಿದ್ದ ಪ್ರಭಾವಿಗಳ ಬಂಧಿಸುವ ಶಕ್ತಿ ನಿಮಗಿಲ್ಲವೆಂದು ಸಿಎಂ ವಿರುದ್ಧ ಕೋಟಾ ಶ್ರೀನಿವಾಸ್ ಪೂಜಾರಿ ಹರಿಹಾಯ್ದರು.