ಬೆಂಗಳೂರು: ನಿನ್ನೆ ರಾತ್ರಿ ತಮ್ಮ ಕಾವೇರಿ ನಿವಾಸವನ್ನು ಖಾಲಿ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೊನೆಗೂ ಸರ್ಕಾರ ತಮಗೆ ನೀಡಿರುವ ಕುಮಾರಕೃಪ ಪೂರ್ವ ನಿವಾಸವನ್ನು ಪ್ರವೇಶಿಸಿದ್ದಾರೆ.
2013 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಒಂದು ವಾರದ ನಂತರ ಅಧಿಕೃತ ಸರ್ಕಾರಿ ನಿವಾಸವಾಗಿ ಕಾವೇರಿಗೆ ಪ್ರವೇಶಿಸಿದ್ದ ಸಿದ್ದರಾಮಯ್ಯ, ಐದು ವರ್ಷ ಅಧಿಕಾರ ಅವಧಿ ಪೂರೈಸಿದ ನಂತರವೂ ಅದೇ ನಿವಾಸದಲ್ಲಿ ತಂಗಿದ್ದರು. 2018ರಲ್ಲಿ ಇವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರದಿದ್ದರೂ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದ ವೇಳೆ ಸಚಿವರಾದ ಕೆ ಜೆ ಜಾರ್ಜ್ಗೆ ಹಂಚಿಕೆಯಾಗಿದ್ದ ಕಾವೇರಿ ನಿವಾಸವನ್ನು ತಮ್ಮ ಬಳಿಯೇ ಉಳಿಸಿಕೊಳ್ಳುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದರು.
ಒಟ್ಟು ಆರೂವರೆ ವರ್ಷಗಳ ವಾಸ್ತವ್ಯದ ನಂತರ ಇದೀಗ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ನಿವಾಸ ಬಿಟ್ಟು ಕೊಡಬೇಕಾದ ಹಿನ್ನೆಲೆ ಒಲ್ಲದ ಮನಸ್ಸಿನಿಂದಲೇ ಬುಧವಾರ ರಾತ್ರಿ ಕಾವೇರಿನ್ನು ತೊರೆದು ಕುಮಾರಕೃಪ ಪೂರ್ವ ನಿವಾಸ ಪ್ರವೇಶಿಸಿದ್ದಾರೆ.
ನಿನ್ನೆ ರಾತ್ರಿಯಿಂದಲೇ ನೂತನ ಸರ್ಕಾರಿ ನಿವಾಸದಲ್ಲಿ ಸಿದ್ದರಾಮಯ್ಯ ವಾಸ್ತವ್ಯ ಆರಂಭಿಸಿದ್ದು, ಕಾಂಗ್ರೆಸ್ ಪ್ರತಿಪಕ್ಷದ ನಾಯಕರಾಗಿ ತಮಗೆ ಅಧಿಕೃತವಾಗಿ ಸರ್ಕಾರ ನೀಡಿರುವ ನಿವಾಸದಲ್ಲಿ ವಾಸಿಸುವ ಮನಸ್ಸು ಮಾಡಿದ್ದಾರೆ. ವಿವಿಧ ಕಾರಣಗಳನ್ನು ನೀಡುತ್ತಾ ಕಳೆದ ನಾಲ್ಕು ತಿಂಗಳಿಂದ ಮನೆ ಖಾಲಿ ಮಾಡದೆ ಕಾವೇರಿಯಲ್ಲಿ ತಂಗಿದ್ದ ಸಿದ್ದರಾಮಯ್ಯ ನಿಲುವಿನಿಂದ ಬೇಸತ್ತಿದ್ದ ಸಿಎಂ ಯಡಿಯೂರಪ್ಪ ಹತಾಶರಾಗಿ ಅವರು ಯಾವಾಗ ಖಾಲಿ ಮಾಡುತ್ತಾರೋ ಮಾಡಲಿ. ಅವರು ಅಲ್ಲಿಂದ ತೆರಳಿದ ಬಳಿಕವಷ್ಟೇ ಕಾವೇರಿಗೆ ನನ್ನ ವಾಸ್ತವ್ಯವನ್ನು ಬದಲಿಸುತ್ತೇನೆ ಎಂದಿದ್ದರು.
ಕೊನೆಗೂ ಸಿದ್ದರಾಮಯ್ಯ ನಿವಾಸ ಖಾಲಿ ಮಾಡಿದ್ದು, ಮುಂದಿನ ಒಂದು ವಾರದಲ್ಲಿ ಕಾವೇರಿಗೆ ಹೊಸದಾಗಿ ಸುಣ್ಣ ಬಣ್ಣ ಬಳಿಯುವ ಕಾರ್ಯ ನಡೆಯಲಿದೆ. ವಿಧಾನಮಂಡಲ ಬಜೆಟ್ ಅಧಿವೇಶನ ಆರಂಭಕ್ಕೆ ಮುನ್ನ ಸಿಎಂ ಯಡಿಯೂರಪ್ಪ ಕಾವೇರಿ ನಿವಾಸ ಪ್ರವೇಶಿಸುವ ಸಾಧ್ಯತೆyಇದೆ.