ಬೆಂಗಳೂರು: ವಿಧಾನಸಭೆ ಪ್ರತಿಪಕ್ಷದ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿಧಾನ ಪರಿಷತ್ ಕಾಂಗ್ರೆಸ್ ಪಕ್ಷದ ನಾಯಕರಾಗಿ ಎಸ್.ಆರ್.ಪಾಟೀಲ್ ಆಯ್ಕೆಯಾಗಿದ್ದಾರೆ.
ಇಂದು ಎಐಸಿಸಿಯಿಂದ ಅಧಿಕೃತ ಆದೇಶ ಹೊರಬಿದ್ದಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಸ್.ಆರ್.ಪಾಟೀಲ್ ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ. ಬಹಳ ದಿನಗಳಿಂದ ನಡೆಯುತ್ತಿದ್ದ ಆಯ್ಕೆ ಇಂದು ಫೈನಲ್ ಆಗಿದೆ. ಕಾಂಗ್ರೆಸ್ ಹೈಕಮಾಂಡ್ ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ಗೆ ಪ್ರತಿಪಕ್ಷ ನಾಯಕರ ಹೆಸರನ್ನು ಅಂತಿಮಗೊಳಿಸಿದೆ.
ದೆಹಲಿಯಲ್ಲಿ ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಪ್ರತಿಪಕ್ಷ ನಾಯಕರ ಹೆಸರನ್ನು ಅಂತಿಮಗೊಳಿಸಿ ಪ್ರಕಟಿಸಿದರು. ಸಿದ್ದರಾಮಯ್ಯನವರು ಈಗಾಗಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದು, ಅವರಿಗೆ ಪ್ರತಿಪಕ್ಷ ನಾಯಕನ ಸ್ಥಾನ ನೀಡಲು ಬಹಳಷ್ಟು ಹಗ್ಗಜಗ್ಗಾಟದ ನಂತರ ಹೈಕಮಾಂಡ್ ತೀರ್ಮಾನ ತಗೆದುಕೊಂಡಿದೆ.
ರಶೀದ್ ಅಲ್ವಿ ಅಭಿನಂದನೆ
ಪ್ರತಿಪಕ್ಷ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯ್ಕೆಯಾಗುತ್ತಿದ್ದಂತೆ ಅಭಿನಂದನೆ ಸಲ್ಲಿಕೆ ಮಾಡಿರುವ ಕಾಂಗ್ರೆಸ್ ಹಿರಿಯ ಮುಖಂಡ ರಶೀದ್ ಅಲ್ವಿ, ಹಿರಿಯ ಮುಖಂಡರಾಗಿರುವ ಸಿದ್ದರಾಮಯ್ಯ ಈಗಾಗಲೇ ಕರ್ನಾಟಕದಲ್ಲಿ ಎರಡು ಸಲ ಮುಖ್ಯಮಂತ್ರಿಯಾಗಿ ಅನುಭವ ಹೊಂದಿದ್ದಾರೆ. ಜನರಿಗೆ ಅವರ ಮೇಲೆ ಅಪಾರ ಪ್ರೀತಿ ಇದೆ. ಶಾಸಕರು ಅವರ ಮೇಲೆ ನಂಬಿಕೆಯಿಟ್ಟು ಪ್ರತಿಪಕ್ಷ ಸ್ಥಾನ ನೀಡಿದ್ದಾರೆ. ಅವರ ಮುಖಂಡತ್ವದಲ್ಲಿ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅಧಿಕಾರ ರಚನೆ ಮಾಡಲಿ ಎಂದು ಆಶಿಸಿದ್ದಾರೆ.
ಡಾ. ಜಯಮಾಲಾ ಅವರ ಬಳಿಯಿದ್ದ ವಿಧಾನ ಪರಿಷತ್ ಕಾಂಗ್ರೆಸ್ ಪಕ್ಷದ ನಾಯಕ ಸ್ಥಾನವನ್ನು ಎಸ್.ಆರ್.ಪಾಟೀಲ್ ಅವರಿಗೆ ನೀಡಲಾಗಿದೆ. ಈ ಮೂಲಕ ಬಹುದಿನಗಳಿಂದ ಕಾಂಗ್ರೆಸ್ ಪ್ರತಿಪಕ್ಷದ ನಾಯಕರು ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಮುಂದಿನ ಸ್ಪರ್ಧೆ ಆರಂಭವಾಗಲಿದೆ.
ಇದೀಗ ಹೆಚ್.ಕೆ.ಪಾಟೀಲ್ ಹಾಗೂ ಜಿ. ಪರಮೇಶ್ವರ್ ನಡುವೆ ಸಿಎಲ್ಪಿ ನಾಯಕ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಹೆಚ್ಚಿದೆ. ಶಾಸಕಾಂಗ ಪಕ್ಷದ ನಾಯಕ ಹಾಗೂ ಉಪ ನಾಯಕರು ಮತ್ತು ವಿಧಾನ ಪರಿಷತ್ ಉಪ ನಾಯಕರ ಆಯ್ಕೆ ಮುಂದಿನ ದಿನಗಳಲ್ಲಿ ನಡೆಯಲಿದ್ದು, ಅಲ್ಲಿಯವರೆಗೆ ಈಗಿರುವ ನಾಯಕರು ಆಯಾ ಸ್ಥಾನವನ್ನು ನಿಭಾಯಿಸಬೇಕೆಂದು ಸೂಚಿಸಲಾಗಿದೆ.
ಈ ಹಿಂದೆಯೂ ಸಹ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಹಾಗೂ ಎಸ್.ಆರ್.ಪಾಟೀಲ್ ವಿಧಾನ ಪರಿಷತ್ನಲ್ಲಿ ಪ್ರತಿಪಕ್ಷ ನಾಯಕರಾಗಿದ್ದರು. ಬಿಜೆಪಿ ಸರ್ಕಾರದ ವಿರುದ್ಧ ಹೋರಾಡಿ ರಾಜ್ಯದಲ್ಲಿ 2013ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಈ ಜೋಡಿ ಯಶಸ್ವಿಯಾಗಿತ್ತು.