ಬೆಂಗಳೂರು : ಇತ್ತೀಚೆಗೆ ನಿಧನರಾದ ಸಚಿವ ಉಮೇಶ್ ಕತ್ತಿ ಹಿರಿಯ ಮುತ್ಸದ್ದಿ ರಾಜಕಾರಣಿ ಮತ್ತು ಸ್ನೇಹ ಜೀವಿಯಾಗಿದ್ದರು. ಜೊತೆಗೆ ಹಾಸ್ಯ ಪ್ರವೃತ್ತಿ ಹೊಂದಿದ್ದರು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಉಮೇಶ್ ಕತ್ತಿಯವರನ್ನು ನೆನಪಿಸಿಕೊಂಡರು.
ವಿಧಾನಸಭೆಯಲ್ಲಿ ಇಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಂಡಿಸಿದ ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಅವರು, ಕತ್ತಿ ಅವರು ತಮ್ಮ ಕ್ಷೇತ್ರದಲ್ಲಿ ಅಪಾರ ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು. ವಿರೋಧ ಪಕ್ಷದಲ್ಲಿದ್ದರೂ ಕಳೆದ ಚುನಾವಣೆಯಲ್ಲಿ ಮನೆಗೆ ಊಟಕ್ಕೆ ಕರೆದಿದ್ದರು. ನಾನೂ ಹೋಗಿದ್ದೆ. ಎರಡು ಗಂಟೆ ಕಾಲ ಅವರ ಮನೆಯಲ್ಲಿದ್ದೆ. ರಾಜ್ಯ ಹಾಗೂ ಕೇಂದ್ರ ರಾಜಕಾರಣದ ಬಗ್ಗೆ ಅವರು ಸುದೀರ್ಘವಾಗಿ ಮಾತನಾಡಿದ್ದರು. ಅವರು ಏನು ಮಾತನಾಡಿದ್ದರು ಎಂದು ಈಗ ನಾನು ಬಹಿರಂಗಪಡಿಸಲ್ಲ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿ ಜಿಲ್ಲೆಯ ವರ್ಣರಂಜಿತ ರಾಜಕಾರಣಿ : ಬೆಳಗಾವಿಯಲ್ಲಿ ಅವರದ್ದೇ ಆದ ಶಕ್ತಿಯನ್ನು ಗಳಿಸಿದ್ದರು. ಉದ್ಯಮ, ರಾಜಕಾರಣ, ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಯಶಸ್ಸು ಕಂಡಿದ್ದರು. ಬೆಳಗಾವಿ ಜಿಲ್ಲೆಯ ವರ್ಣರಂಜಿತ ರಾಜಕಾರಣಿಯಾಗಿದ್ದ ಉಮೇಶ್ ಕತ್ತಿಯವರು ಅಜಾತಶತ್ರು ಎಂದು ಸಿದ್ದರಾಮಯ್ಯ ಹೇಳಿದರು.
ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ತುಂಬಾ ಕಾಳಜಿ ಹೊಂದಿದ್ದ ಅವರು, ಆಗಾಗ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂದು ಹೇಳುತ್ತಿದ್ದರು. ನಾನು ಆಗ, ಪ್ರತ್ಯೇಕ ರಾಜ್ಯ ಕೇಳುವುದು ಸಮಂಜಸವಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕೆಂದು ಹೇಳಿ. ಆದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಎಂದು ಕೇಳಬೇಡಿ ಎಂದಿದ್ದೆ ಎಂದು ಹೇಳಿದರು.
ಮಾಜಿ ಸಚಿವ ರಘುಪತಿ ನನ್ನ ಆತ್ಮೀಯ : ಇನ್ನು, ಹಿರಿಯ ರಾಜಕಾರಣಿ, ಮಾಜಿ ಸಚಿವ ರಘುಪತಿ ಅವರು ನನಗೆ ಆತ್ಮೀಯರಾಗಿದ್ದರು. ಅವರು ನಿಧನರಾಗುವ ಹದಿನೈದು ದಿನಗಳ ಹಿಂದೆ ಮಾಜಿ ಸಚಿವ ಕೆ.ಜೆ. ಜಾರ್ಜ್ ನಿವಾಸದಲ್ಲಿ ನಾವೆಲ್ಲ ಸೇರಿದ್ದೆವು. ಅಲ್ಲಿಗೆ ರಘುಪತಿಯವರೂ ಆಗಮಿಸಿದ್ದರು. ಆಗ ಅವರು ಲವಲವಿಕೆಯಿಂದಲೇ ಮಾತನಾಡಿದ್ದರು. ಬಿಬಿಎಂಪಿ ಚುನಾವಣೆ ಬರುತ್ತಿದೆ. ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಭೆ ಕರೆಯಿರಿ ಎಂದು ಹೇಳಿದ್ದರು ಎಂದು ಸಿದ್ದರಾಮಯ್ಯ ಸ್ಮರಿಸಿದರು.
ಇನ್ನು, ರಘುಪತಿಯವರು ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ಜಾರಿಗೆ ತಂದರು. ದೂರದರ್ಶನ ಕೇಂದ್ರ ಸ್ಥಾಪನೆಯಲ್ಲೂ ಇವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಇದೇ ವೇಳೆ ಹೇಳಿದರು.
ಶ್ರೀರಾಮರೆಡ್ಡಿ ಹುಟ್ಟು ಹೋರಾಟಗಾರರಾಗಿದ್ದರು : ಕಮ್ಯುನಿಸ್ಟ್ ಪಕ್ಷದ ನಾಯಕ ಶ್ರೀರಾಮರೆಡ್ಡಿ ಬಗ್ಗೆ ಮಾತನಾಡಿದ ಅವರು, ಇವರು ಹುಟ್ಟು ಹೋರಾಟಗಾರರಾಗಿದ್ದರು. ಕಾರ್ಮಿಕರ ಬಗ್ಗೆ, ನೀರಾವರಿ ಬಗ್ಗೆ ಹೋರಾಟ ಮಾಡಿದ್ದರು. ನಾನು ಸಿಎಂ ಆಗಿದ್ದಾಗ ಮಾಧುಸ್ವಾಮಿ, ಶ್ರೀರಾಮರೆಡ್ಡಿ, ವಾಟಾಳ್ ನಾಗರಾಜ್, ಜಯ ಪ್ರಕಾಶ್, ರಾಜೇಂದ್ರನ್ ಅವರು ಗುಂಪು ಸೇರುತ್ತಿದ್ದರು. ಎಲ್ಲರೂ ಮಾತನಾಡುತ್ತಿದ್ದರು. ನಮ್ಮ ಮೇಲೆ ಮುಗಿ ಬೀಳುತ್ತಿದ್ದರು ಎಂದು ಸಿದ್ದರಾಮಯ್ಯ ನೆನಪಿಸಿಕೊಂಡರು.
ಇದಕ್ಕೂ ಮುನ್ನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದನದಲ್ಲಿ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿ, ಅಗಲಿದ ಗಣ್ಯರ ಕುರಿತು ಗುಣಗಾನ ಮಾಡಿದರು.
ಇದನ್ನೂ ಓದಿ : ನನಗೆ ಹತ್ತು ರೂ ಕೊಟ್ಟು ವಿರೋಧ ಪಕ್ಷದಲ್ಲಿರಲು ಲಾಯಕ್ಕು ಎಂದಿದ್ದರು.. ಕತ್ತಿ ಸ್ಮರಿಸಿದ ಸಚಿವ ಮಾಧುಸ್ವಾಮಿ