ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಬಡವರು, ಕಾರ್ಮಿಕರ ಜೀವನಕ್ಕೆ ಭದ್ರತೆ ನೀಡುತ್ತಾರೆ ಎಂದುಕೊಂಡಿದ್ವಿ, ಆದ್ರೆ ಅವರ ಭಾಷಣ ರಾಜಕೀಯ ಭಾಷಣದ ರೀತಿಯಲ್ಲಿ ಇತ್ತು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜೊತೆ ಮಾತನಾಡಿ, ಪ್ರಧಾನಿ ಭಾಷಣದ ಬಗ್ಗೆ ಬಹಳ ಜನರು ನಿರೀಕ್ಷೆಯನ್ನಿಟ್ಟುಕೊಂಡಿದ್ದರು. 30 ವರ್ಷ ಹಿಂದಕ್ಕೆ ನಮ್ಮ ಆರ್ಥಿಕತೆ ಹೋಗಿದೆ, ಕೃಷಿ ಕಾರ್ಮಿಕರು, ಹಳ್ಳಿಗಾಡಿನ ಜನ ಸಂಕಷ್ಟದಲ್ಲಿ ಇದ್ದಾರೆ, ಅವರ ರಕ್ಷಣೆ ಬಹುಮುಖ್ಯ, ಆದ್ರೆ ಭಾಷಣ ರಾಜಕೀಯ ಭಾಷಣದ ರೀತಿಯಿತ್ತು ಎಂದು ತಿಳಿಸಿದರು.
ಕೊರೊನಾ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಲಾಕ್ ಡೌನ್ ವಿರೋಧಿಸಲಿಲ್ಲ, ಮುಂದುವರೆಸಿದ್ದನ್ನೂ ಕೂಡಾ ವಿರೋಧ ಮಾಡಲ್ಲ. ಆದ್ರೆ ಅವರ ಭಾಷಣ ರಾಜಕೀಯ ಭಾಷಣವಾಗಿದೆಯೆಂದು ಅಭಿಪ್ರಾಯಪಟ್ಟರು. ಅಲ್ಲದೇ ಸದ್ಯ ಲಾಕ್ಡೌನ್ ಆದೇಶ ಪಾಲಿಸುವುದು ಬಹಳ ಮುಖ್ಯ, ಆದ್ರೆ ಲಾಕ್ಡೌನ್ ಸಂಪೂರ್ಣ ಯಶಸ್ವಿಯಾಗಿಲ್ಲ. ಸರ್ಕಾರ ನಮ್ಮ ಸಲಹೆ ಕೂಡ ಸ್ವೀಕರಿಸಿಲ್ಲ ಎಂದು ತಿಳಿಸಿದರು.
ರಾಜ್ಯ ಸರ್ಕಾರ ದಿವಾಳಿಯಾಗಿದೆ: ಬಿಡಿಎ ಸೈಟ್ಗಳನ್ನು ಹರಾಜು ಹಾಕುವುದಕ್ಕೆ ಮುಂದಾಗಿದ್ದಾರೆ ಎಂದ್ರೆ ಸರ್ಕಾರ ದಿವಾಳಿ ಆಗಿದೆ ಅಂತ ಅರ್ಥ ಅಲ್ವಾ? ಸರ್ಕಾರದ ಆಸ್ತಿಯನ್ನು ಮಾರುವುದಕ್ಕೆ ಹೋಗಿರುವುದನ್ನು ಗಮನಿಸಿದ್ರೆ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದೆ. ಸರ್ಕಾರಕ್ಕೆ ಖರ್ಚಿನ ಮೇಲೆ ನಿಯಂತ್ರಣ ಇಲ್ಲ , ಭ್ರಷ್ಟಾಚಾರ ಹೆಚ್ಚಾಗಿದೆ ಎಂದರು. ಅಬಕಾರಿ ಮತ್ತು ನೋಂದಣಿ ನಿಂತಿದೆ. ಈ ಸಂದರ್ಭದಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಕಷ್ಟವೆಂದರು.ನಿಗಮ ಮತ್ತು ಮಂಡಳಿ ಅಧ್ಯಕ್ಷರ ನೇಮಕ ಆಗಿಲ್ಲ, ಆದ್ರೂ ಅವರ ಹೆಸರಲ್ಲಿ ಕಾರನ್ನು ಈಗ ಚೇರ್ಮನ್ ಎಂಜಾಯ್ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಸರ್ಕಾರದಲ್ಲಿ ಭ್ರಷ್ಟಾಚಾರ ಇಲ್ಲದ ರೀತಿ ಮಾಡಬೇಕು ಎಂದು ತಿಳಿಸಿದರು.
ಆರ್ಥಿಕ ನಿರ್ವಹಣೆಯಲ್ಲಿ ವೈಫಲ್ಯ: ಕೇಂದ್ರ ಸರ್ಕಾರ ನಮಗೆ ನೀಡಬೇಕಾದ ಜಿಎಸ್ಟಿ ಪಾಲು ಕೊಡಲಿಲ್ಲ, ಆರ್ಥಿಕ ನಿರ್ವಹಣೆ ಮಾಡಲು ಅನುಭವ ಕೊರತೆಯಿದೆ, ತೆರಿಗೆ ಸಂಗ್ರಹ ಮಾಡುವಲ್ಲಿ ವಿಫಲ, ರಾಜ್ಯದಲ್ಲಿ ಜಿಎಸ್ಟಿ ನಿರ್ವಹಣೆ ಮಾಡಲು ಬಂದಿಲ್ಲ, ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿಲ್ಲ ಎಂದರು.