ಬೆಂಗಳೂರು: ಸೈಕಲ್ ಓಡಿಸಿದ್ದು ಹೊಸದೇನಲ್ಲ, ಹಿಂದೆಲ್ಲಾ ಸೈಕಲ್ನಲ್ಲಿ ಓಡಾಡುತ್ತಿದ್ದೆ. ಆದರೆ ತುಂಬಾ ದಿನಗಳ ನಂತರ ಪ್ರಯತ್ನಿಸಿದ್ದರಿಂದ ಹೆಚ್ಚು ದೂರ ಓಡಿಸಲು ಸಾಧ್ಯವಾಗಲಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಾವು ಸೈಕಲ್ ಸವಾರಿ ಮಾಡಿದ ವಿಡಿಯೋ ವೈರಲ್ ಆಗಿದ್ದರ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ನಮ್ಮ ಊರಿಗೆ ಸೈಕಲ್ನಲ್ಲೇ ಹೋಗುತ್ತಿದ್ದೆ. ಮೈಸೂರಿನಿಂದ ನಮ್ಮೂರು ಒಟ್ಟು 23 ಕಿಲೋಮೀಟರ್ ದೂರ. ಅಷ್ಟು ದೂರ ಸೈಕಲ್ನಲ್ಲಿ ಹೋಗುತ್ತಿದ್ದೆ. ಎಷ್ಟು ವರ್ಷಗಳಾಗಿತ್ತು ಸೈಕಲ್ ಓಡಿಸಿ. ನಿನ್ನೆ ಓಡಿಸಿದಾಗ ಸರಿಯಾಗಿ ಓಡಿಸಲಿಕ್ಕೆ ಆಗಲಿಲ್ಲ. ನಿಧಾನವಾಗಿ ನಿತ್ಯ ಓಡಿಸಬೇಕು ಎಂದುಕೊಂಡಿದ್ದೇನೆ. ಬೆಳಗಿನ ಹೊತ್ತು ವಾಕ್ ಮಾಡುತ್ತೇನೆ ಸಂಜೆ ಹೊತ್ತು ಸೈಕಲ್ ಓಡಿಸುವ ಉದ್ದೇಶ ಇದೆ ಎಂದರು.
ಕಾಲೇಜಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬಹುತೇಕ ಎಲ್ಲರೂ ಸೈಕಲನ್ನು ಓಡಿಸುತ್ತಿದ್ದರು. ಹೀಗಾಗಿ ನಾನು ಆ ಸಂದರ್ಭದಲ್ಲಿ ಅಂತಹ ಗಮನ ಸೆಳೆಯುವ ವ್ಯಕ್ತಿಯೇನೂ ಆಗಿರಲಿಲ್ಲ. ಫಿಟ್ನೆಸ್ಗೋಸ್ಕರ ಇದನ್ನ ತರಿಸಿಕೊಂಡಿದ್ದೇನೆ. ಹಾಗಂತ ಈಗ ಫಿಟ್ನೆಸ್ ಇಲ್ಲ ಅಂತೇನು ಅಲ್ಲ. ಹೆಚ್ಚುವರಿ ಫಿಟ್ನೆಸ್ಗೋಸ್ಕರ ತರಿಸಿಕೊಂಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ರು.