ಬೆಂಗಳೂರು: ಮಾಜಿ ಸಿಎಂ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ಮೈಸೂರು ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕರಾಗಿ ಗುರುತಿಸಿಕೊಂಡಿದ್ದ ಈ ಇಬ್ಬರು ನಾಯಕರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಹದೇವಪ್ಪ ಸೋತ ನಂತರ ಸ್ವಲ್ಪ ದೂರವಾಗಿದ್ದರು. ಇಬ್ಬರ ನಡುವೆ ಆತ್ಮೀಯತೆ ಕೂಡ ಕಡಿಮೆಯಾಗಿತ್ತು. ಆದರೆ ಇಂದು ಸಿದ್ದರಾಮಯ್ಯ ದಿಢೀರಾಗಿ ಮಹಾದೇವಪ್ಪ ನಿವಾಸಕ್ಕೆ ಭೇಟಿ ಕೊಟ್ಟಿದ್ದು ಉಭಯ ನಾಯಕರು ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.
ಭೇಟಿ ನಂತರ ಮಾತನಾಡಿದ ಸಿದ್ದರಾಮಯ್ಯ, ನಾನು ಯಾವುದೇ ಸಂಘಟನೆ ಕುರಿತು ಮಾತನಾಡಿಲ್ಲ. ನಾನು ಹೇಳದ ವಿಚಾರದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲ್ಲ. 'ಹಿಂದ' ಸಂಘಟನೆ ಮಾಡುವ ಬಗ್ಗೆ ಪಾಸಿಟಿವ್ ಮಾತಾಡಲ್ಲ - ನೆಗೆಟಿವ್ ಸಹ ಮಾತಾಡಲ್ಲ. ಹಿಂದುಳಿದವರು, ಸಾಮಾಜಿಕವಾಗಿ ಶೋಷಣೆಗೆ ಒಳಗಾದವರಿಗೆ ಮೀಸಲಾತಿ ಸಿಗಬೇಕು ಎಂಬುದು ನನ್ನ ನಿಲುವು ಎಂದರು.
ಭಾರತದ ಸಂವಿಧಾನ ಸಹ ಇದನ್ನು ಹೇಳಿದೆ. ಯಾರೇ ಮೀಸಲಾತಿ ಕೇಳಿದ್ರೂ ನಾನು ವಿರೋಧ ಮಾಡಲ್ಲ. ಯಾರೇ ಬೇಕಾದರೂ ಮೀಸಲಾತಿಗಾಗಿ ಹೋರಾಟ ಮಾಡಬಹುದು ಎಂದು ಹೇಳುವ ಮೂಲಕ ಪರೋಕ್ಷವಾಗಿ ಹಿಂದ ಸಂಘಟನೆಯ ಅಗತ್ಯವಿದೆ ಎಂಬ ವಿಚಾರವನ್ನು ಪ್ರತಿಪಾದಿಸಿದರು.
ಕುರುಬ ಸಮಾಜದಿಂದ ಗ್ರಾಮ ಪಂಚಾಯತಿಯಲ್ಲಿ ಗೆದ್ದವರಿಗೆ ಸನ್ಮಾನ ಮಾಡಲು ಸಮಾವೇಶ ಮಾಡ್ತಾ ಇದ್ದಾರೆ. ನಾನು ಕುರುಬ ಎಸ್ ಟಿ ಹೋರಾಟ ಮತ್ತು ಸಚಿವ ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದರು.
ಅನಾರೋಗ್ಯ ಹಿನ್ನೆಲೆ ಹೊರಗೆ ಬಂದಿರಲಿಲ್ಲ : ಮಾಜಿ ಸಚಿವ ಎಚ್ ಸಿ ಮಹಾದೇವಪ್ಪ ಮಾತನಾಡಿ, ನನ್ನ ಸಿದ್ದರಾಮಯ್ಯ ನಡುವಿನ ಭಾಂಧವ್ಯ ಹೇಗಿತ್ತೋ ಹಾಗೇ ಇದೆ. ಸಂವಿಧಾನದ ಆಶಯಕ್ಕೆ ಧಕ್ಕೆಯಾದಾಗ ಸದಾ ಹೋರಾಟ ಮಾಡ್ತಾ ಬಂದಿದ್ದೇವೆ. ಬರೀ ಅಧಿಕಾರ ಮಾಡ್ತಾ ಇದ್ದವರಲ್ಲ. ನನಗೆ ಆರೋಗ್ಯ ಸಮಸ್ಯೆ ಆಗಿದ್ದರಿಂದ ಕೆಲವು ಕಾಲ ಮನೆಯಿಂದ ಹೊರಗೆ ಬಂದಿಲ್ಲ ಎಂದು ಹೇಳಿದರು.
ಮತ್ತೆ ಹೋರಾಟ ಆರಂಭಿಸುವ ವಿಚಾರ ಪ್ರಸ್ತಾಪಿಸಿ, ಆಗಾಗ್ಗೆ ವಿಷಯಾಧಾರಿತ ಹೋರಾಟ ನಡೆಯಲೇಬೇಕು. ರೈತರ ಹೋರಾಟ ನಡೆದಿಲ್ಲವೇ..? ಸಮಸ್ಯೆ ಅದಾಗಲೇ ಹೋರಾಟ ಹುಟ್ಟಿಕೊಳ್ಳುತ್ತದೆ ಎಂದು ಪರೋಕ್ಷವಾಗಿ ಹಿಂದ ಹೋರಾಟದ ಬಗ್ಗೆ ಚರ್ಚೆಯಾಗಿದೆ ಎಂಬ ಮಾಹಿತಿ ನೀಡಿದರು.