ಬೆಂಗಳೂರು: ಅಧಿಕಾರ ಹೋದ ಒಂದು ತಿಂಗಳಲ್ಲಿ ಈ ರೀತಿ ಕೆಸರೆರಚಾಟ ಶೋಭೆ ತರುವಂತದಲ್ಲ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೆಚ್.ಡಿ.ದೇವೇಗೌಡರಿಗೆ ಟಾಂಗ್ ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ಬಂದ ಬಳಿಕ ವಿಶ್ವಾಸ ನಿರ್ಣಯ ಮಂಡನೆ ಮಾಡುವ ವೇಳೆ ಕುಮಾರಸ್ವಾಮಿ ಕಾಂಗ್ರೆಸ್ ನಾಯಕತ್ವದ ಬಗ್ಗೆ ಏನು ಮಾತನಾಡಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಅವರು ಏನು ಮಾತನಾಡಿದ್ದಾರೆ. ಜತೆಗೆ ಸದನದ ಹೊರಗಡೆ ಮಾಜಿ ಪ್ರಧಾನಿ ದೇವೇಗೌಡರು ಏನು ಮಾತನಾಡಿದ್ದಾರೆ ಎಂಬುದನ್ನು ನಾವು ಗಮನಿಸಿದ್ದೇವೆ. ಒಟ್ಟಾರೆ ಹೇಳುವುದಾದರೆ ಮೈತ್ರಿ ಸರ್ಕಾರ ಪತನವಾಗಲು ಬಿಜೆಪಿ ಕಾರಣವಾಗಿದೆ ಎಂಬುದು ಅವರೆಲ್ಲರ ಹೇಳಿಕೆಗಳಿಂದ ಸ್ಪಷ್ಟವಾಗುತ್ತದೆ. ಆದರೆ ಅಧಿಕಾರ ಹೋದ ಒಂದು ತಿಂಗಳಲ್ಲಿ ಈ ರೀತಿ ಕೆಸರೆರಚಾಟ ಶೋಭೆ ತರುವಂತದಲ್ಲ. ನಮ್ಮ ಇಬ್ಬರ ಗುರಿ ಪ್ರಜಾಪ್ರಭುತ್ವ ವಿರೋಧಿಯಾಗಿರುವ ಬಿಜೆಪಿ ಎದುರಿಸುವುದಾಗಬೇಕು. ಮೈತ್ರಿ ಸರ್ಕಾರ ಪತನವಾಗಲು ಮೂಲ ಕಾರಣ ಬಿಜೆಪಿ ಎಂದು ಆರೋಪಿಸಿದರು.
ಕಾಂಗ್ರೆಸ್ ಆಗಲಿ ಸಿದ್ದರಾಮಯ್ಯ ಆಗಲಿ ಎಂದೂ ಸಹ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು, ಪತನಗೊಳಿಸಲು ಪ್ರಯತ್ನ ಮಾಡಿಲ್ಲ. ವಿಶ್ವಾಸ ಮತಯಾಚನೆ ವೇಳೆ ಕುಮಾರಸ್ವಾಮಿ ಸದನದಲ್ಲಿ ಕಾಂಗ್ರೆಸ್ ಬಗ್ಗೆ ಮಾತನಾಡಿರುವುದು ಸುಳ್ಳಾ, ದೇವೇಗೌಡರು ಕಾಂಗ್ರೆಸ್ ಪರ ಮಾತನಾಡಿರುವುದು ಸುಳ್ಳಾ?. ಇದೀಗ ಕುಮಾರಸ್ವಾಮಿ ಸದನದಲ್ಲಿ ಮಾತನಾಡಿರುವುದಕ್ಕೆ ವಿರುದ್ಧವಾಗಿ ದೇವೇಗೌಡರು ಮಾತನಾಡಿರುವುದು ಏಕೆ ಎಂದು ಗೊತ್ತಾಗುತ್ತಿಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿಯಲ್ಲಿನ ಆಧುನಿಕ ಶಕುನಿ ಯಾರು?:
ನನಗೆ ಅಯ್ಯೋ ಅನ್ನಿಸುವುದು ನಮ್ಮ ಹದಿನೇಳು ಅನರ್ಹ ಶಾಸಕರ ಬಗ್ಗೆ. ಅವರು ಇಂದು ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಇವರನ್ನೆಲ್ಲ ಜತೆಗೆ ಕರೆದುಕೊಂಡು ಮುಗಿಸಿದ ಶಕುನಿ ಯಾರು. ಇದನ್ನು ಜನತೆ ತೀರ್ಮಾನ ಮಾಡಬೇಕು ಎಂದು ವಾಗ್ದಾಳಿ ನಡೆಸಿದರು.
ಆ ಶಕುನಿ ಯಡಿಯೂರಪ್ಪನವರಾ, ಬಿ.ಎಲ್.ಸಂತೋಷಾ ಅಥವಾ ಅವರನ್ನು ಪುಸಲಾಯಿಸಿದ ಮಧ್ಯವರ್ತಿಗಳಾ ಎಂದು ಜನರೇ ತೀರ್ಮಾನ ಮಾಡಬೇಕು. ಅವರನ್ನು ಮುಗಿಸಿದ ಬಿಜೆಪಿಯಲ್ಲಿನ ಶಕುನಿ ಯಾರು ಎಂಬುದು ಜನರ ಮುಂದಿರುವ ದೊಡ್ಡ ಪ್ರಶ್ನೆ ಎಂದು ವಿವರಿಸಿದರು.
ಆಧುನಿಕ ಶಕುನಿಗಳ ಮಾತುಗಳನ್ನು ಕೇಳಿ ತೀರ್ಮಾನಗಳನ್ನು ಕೈಗೊಂಡರೆ ಯಾವ ರೀತಿ ದುಷ್ಪರಿಣಾಮ ಆಗುತ್ತದೆ. ಅವರ ರಾಜಕೀಯ ಬದುಕಿನ ಮೇಲೆ ಆಗುವ ದುಷ್ಪರಿಣಾಮಗಳು ಏನು ಎಂಬುದನ್ನು ಅನರ್ಹ ಶಾಸಕರು ಅರ್ಥ ಮಾಡಿಕೊಳ್ಳಬೇಕು ಎಂದು ಇದೇ ವೇಳೆ ಕಿವಿಮಾತು ಹೇಳಿದರು.