ಬೆಂಗಳೂರು: ಪಕ್ಷದಲ್ಲಿ ತಮ್ಮ ಬಲ ಹೆಚ್ಚಿಸಿಕೊಳ್ಳಲು ನಿರ್ಧರಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾರ್ಚ್ 24ರಂದು ಪಕ್ಷದ ಹಿರಿಯ ನಾಯಕರಿಗೆ ಔತಣಕೂಟ ಹಮ್ಮಿಕೊಂಡಿದ್ದಾರೆ.
ಅಂದು ಕಾಂಗ್ರೆಸ್ ಪಕ್ಷದ ಎಲ್ಲಾ ಹಿರಿಯ ನಾಯಕರಿಗೆ ಸಿದ್ದರಾಮಯ್ಯ ತಮ್ಮ ಸರ್ಕಾರಿ ನಿವಾಸದಲ್ಲಿಯೇ ಈ ಭೋಜನ ಕೂಟ ಆಯೋಜಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು, ಶಾಸಕರು, ಪರಿಷತ್ ಸದಸ್ಯರು, ಸಂಸದ ಹಾಗೂ ರಾಜ್ಯಸಭಾ ಸದಸ್ಯರಿಗೆ ಆಹ್ವಾನ ನೀಡಲಾಗಿದೆ.
ಭೋಜನ ಕೂಟದಲ್ಲಿ ಉಪ ಚುನಾವಣೆ ವಿಚಾರ ಸೇರಿದಂತೆ ಹಲವು ವಿಚಾರ ಚರ್ಚೆ ಆಗಲಿದೆ. ಸಿಡಿ ವಿಚಾರ, ಮೀಸಲಾತಿ ಸೇರಿದಂತೆ ಎಲ್ಲ ವಿಚಾರ ಇಲ್ಲಿ ಪ್ರಸ್ತಾಪವಾಗುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಕಾಂಗ್ರೆಸ್ ಪಕ್ಷ ಹಲವು ವಿಚಾರಗಳನ್ನು ಮುಂದಿಟ್ಟು ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಹೋರಾಟ ಕೈಗೊಳ್ಳಲು ನಿರ್ಧರಿಸಿದೆ. ಈ ಬಜೆಟ್ ಅಧಿವೇಶನದ ಬಳಿಕ ಸರಣಿ ರೂಪದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಧರಣಿ ಸತ್ಯಾಗ್ರಹ ಹಾಗೂ ವಿವಿಧ ರೀತಿಯ ಕಾನೂನು ಹೋರಾಟಗಳನ್ನು ನಡೆಸಲು ಕಾಂಗ್ರೆಸ್ ತಯಾರಿ ಮಾಡುತ್ತಿದೆ.
ಪಕ್ಷದ ವಿವಿಧ ವಿಭಾಗಗಳ ಮೂಲಕ ಹೋರಾಟ ನಡೆಸಲು ನಿರ್ಧರಿಸಿದ್ದು, ರಾಜ್ಯ ಕಾಂಗ್ರೆಸ್ ನಾಯಕರು ಒಮ್ಮತದಿಂದ ಎಲ್ಲಾ ಹೋರಾಟದಲ್ಲಿ ಭಾಗವಹಿಸುವಂತೆ ಮನವಿ ಮಾಡಲು ಸಿದ್ದರಾಮಯ್ಯ ಈ ಔತಣಕೂಟ ಕರೆದಿದ್ದಾರೆ. ಬಹುತೇಕ ಎಲ್ಲಾ ನಾಯಕರೂ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅಲ್ಲಿಯೇ ಮುಂಬರುವ ಹೋರಾಟದ ಕಾರ್ಯತಂತ್ರಗಳ ರೂಪುರೇಷೆ ಹೆಣೆಯುವ ಕಾರ್ಯವನ್ನು ನಾಯಕರು ಮಾಡಲಿದ್ದಾರೆ. ಪಕ್ಷದ ಮುಂಬರುವ ದಿನಗಳಲ್ಲಿ ಕೈಗೊಳ್ಳುವ ಹೋರಾಟಗಳ ಕುರಿತು ಹಿರಿಯ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಲಿರುವ ಸಿದ್ದರಾಮಯ್ಯ, ಡಿನ್ನರ್ ಪಾಲಿಟಿಕ್ಸ್ ಮೂಲಕ ಉಪ ಚುನಾವಣೆಗೂ ತಯಾರಿ ಮಾಡಲಿದ್ದಾರೆ.