ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಮಾಜಿ ಸಿ.ಎಂ ಸಿದ್ದರಾಮಯ್ಯ ಒತ್ತಾಯಿಸಿರುವುದು ಹಾಸ್ಯಾಸ್ಪದ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಎಂದು ಮಾಜಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸರೋಜಿನಿ ಮಹಿಷಿ ವರದಿ ಮಂಡನೆಯಾದ ದಿನದಿಂದಲೂ ಸಿದ್ದರಾಮಯ್ಯ ಹಾಗೂ ಅವರು ಪ್ರತಿನಿಧಿಸುವ ಪಕ್ಷವೇ ಅಧಿಕಾರದಲ್ಲಿತ್ತು. ಆಗೆಲ್ಲ ಸರೋಜಿನಿ ಮಹಿಷಿ ವರದಿ ಜಾರಿಗೆ ಯಾವುದೇ ಪ್ರಯತ್ನ ಮಾಡದೆ ಅಧಿಕಾರದಿಂದ ಇಳಿದ ತಕ್ಷಣ ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸುತ್ತಿದ್ದಾರೆ ಎಂದರೆ ಏನು ಹೇಳುವುದು. ಅವರನ್ನು ನಂಬುವವರ ಬಗ್ಗೆಯೂ ನಾನು ಬಾಯಿ ಬಿಟ್ಟು ಏನನ್ನೂ ಹೇಳಬೇಕಾಗಿಲ್ಲ.ಕರ್ನಾಟಕ ಬಂದ್ಗೆ ಕರೆ ನೀಡಿರುವ ಸಂಘಟನೆಗಳ ಜತೆ ಈಗಾಗಲೇ ಸಿಎಂ, ನಾನು ಹಾಗೂ ಡಿಸಿಎಂ ಅಶ್ವತ್ಥ್ ನಾರಾಯಣ ಮಾತುಕತೆ ನಡೆಸಿದ್ದೇವೆ.
ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಕಡ್ಡಾಯಗೊಳಿಸಲು ನಮ್ಮ ಸಮ್ಮತಿ ಇದೆ. ಶಿಕ್ಷಣದಲ್ಲಿ ಕನ್ನಡ ಕಡ್ಡಾಯಗೊಳಿಸದೆ ಆಡಳಿತದಲ್ಲಿ ಕನ್ನಡ ಕಡ್ಡಾಯಗೊಳಿಸಲು ಸಾಧ್ಯವಿಲ್ಲ. ಆದರೂ ಸುಪ್ರೀಂ ಕೋರ್ಟ್ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಕೆ ಸಾಧ್ಯವೇ ಎಂದು ಪರಿಶೀಲಿಸುತ್ತೇವೆ. ಬಂದ್ ಕರೆ ಹಿಂದೆ ಪಡೆಯುವಂತೆ ಕನ್ನಡಪರ ಸಂಘಟನೆಗಳಿಗೂ ಮನವಿ ಮಾಡುತ್ತೇನೆ ಎಂದು ಹೇಳಿದರು.
ಸಚಿವರ ಖಾತೆಗಳ ಬದಲಾವಣೆ ಮುಖ್ಯಮಂತ್ರಿಯವರ ಪರಮಾಧಿಕಾರ. ಅವರು ಯಾವ ಖಾತೆ ಯಾಕೆ ಕೊಟ್ಟರು ಎಂದು ಪ್ರಶ್ನೆ ಮಾಡುವಂತಿಲ್ಲ. ನನಗೆ ಸಕ್ಕರೆ ಖಾತೆ ವಾಪಸ್ ಪಡೆದು ಹೆಚ್ಚುವರಿಯಾಗಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ನೀಡಿದ್ದಾರೆ.ಈ ಖಾತೆಗಳಿಗೆ ಹೆಚ್ಚು ಅನುದಾನ ಕೊಟ್ಟರೆ ಹೆಚ್ಚು ಸಮರ್ಥವಾಗಿ, ಇಲ್ಲವಾದರೆ ಅನುದಾನದ ಮಿತಿಯಲ್ಲೇ ಸಮರ್ಥವಾಗಿ ಯಶಸ್ವಿಯಾಗಿ ನಿರ್ವಹಣೆ ಮಾಡುತ್ತೇನೆ ಎಂದು ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ.