ಬೆಂಗಳೂರು: ಕಾವೇರಿ ಬದಲು ನೀಡಿರುವ ರೇಸ್ ವ್ಯೂ ಕಾಟೇಜ್ಗೆ ತೆರಳಲು ನಿರಾಕರಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪೀಕರ್ಗೆ ಹಂಚಿಕೆಯಾಗಿರುವ ನಿವಾಸ ನೀಡುವಂತೆ ಹೊಸದಾಗಿ ಪತ್ರ ಬರೆದಿದ್ದಾರೆ.
ಕಾವೇರಿ ನಿವಾಸದಲ್ಲಿ ಎಷ್ಟು ದಿನ ಇರುತ್ತಾರೋ ಇರಲಿ ಅವರು ಖಾಲಿ ಮಾಡಿದ ನಂತರವೇ ಆ ನಿವಾಸಕ್ಕೆ ಹೋಗುತ್ತೇನೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ ಬೆನ್ನಲ್ಲೇ ಸಿದ್ದು ಪತ್ರದ ಮೂಲಕ ಹೊಸ ಬೇಡಿಕೆ ಇಟ್ಟಿದ್ದಾರೆ. ಈ ಸಂಬಂಧ ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಗಾಂಧಿ ಭವನದ ಹಿಂಭಾಗದಲ್ಲಿರುವ ಕುಮಾರಸ್ವಾಮಿ ಪಾರ್ಕ್ ಈಸ್ಟ್ ವ್ಯಾಪ್ತಿಯ ನಂಬರ್-1 ನಿವಾಸವನ್ನು ಹಂಚಿಕೆ ಮಾಡುವಂತೆ ಬೇಡಿಕೆಯಿಟ್ಟಿದ್ದಾರೆ.
ಮೈತ್ರಿ ಸರ್ಕಾರದ ಅವಧಿಯಲ್ಲಿ ಹೆಚ್ ಡಿ ರೇವಣ್ಣಗೆ ಈ ನಿವಾಸ ಹಂಚಿಕೆಯಾಗಿತ್ತು. ಸದ್ಯ ರೇವಣ್ಣ ಅವರು ಆ ನಿವಾಸ ತೆರವುಗೊಳಿಸಿದ್ದಾರೆ. ಈ ನಡುವೆ ಮನೆ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಹಂಚಿಕೆಯಾಗಿದೆ. ಈಗ ಅದೇ ನಿವಾಸಕ್ಕೆ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ.
ಈ ಹಿಂದೆ ಕಾವೇರಿಯಲ್ಲೇ ಮುಂದುವರೆಯುವುದಾಗಿ ಸಿದ್ದರಾಮಯ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಸರ್ಕಾರ ಸಿದ್ದರಾಮಯ್ಯ ಬೇಡಿಕೆಯನ್ನು ನಿರಾಕರಿಸಿ ರೇಸ್ ವ್ಯೂ ಕಾಟೇಜ್-2 ಮನೆಯನ್ನು ಹಂಚಿಕೆ ಮಾಡಿತ್ತು. ಆದರೆ, ಆ ನಿವಾಸ ಒಪ್ಪದ ಸಿದ್ದು, ಇದೀಗ ಮತ್ತೊಂದು ಪತ್ರ ಬರೆದು ಕುಮಾರಕೃಪಾ ಈಸ್ಟ್ನ ನಿವಾಸಕ್ಕೆ ಹೊಸದಾಗಿ ಬೇಡಿಕೆ ಇಟ್ಟಿದ್ದಾರೆ.
ಈ ಹಿಂದೆ ಪ್ರತಿ ಪಕ್ಷದ ನಾಯಕನಾಗಿದ್ದಾಗ ಇದೆ ಮನೆಯಲ್ಲೇ ವಾಸ್ತವ್ಯ ಹೂಡಿದ್ದ ಸಿದ್ದರಾಮಯ್ಯ, ಇದೀಗ ಮತ್ತೆ ಪ್ರತಿ ಪಕ್ಷದ ನಾಯಕರಾದ ಮೇಲೆ ಕಾವೇರಿ ಇಲ್ಲದಿದ್ದರೆ ಕಡೇ ಪಕ್ಷ ತಮ್ಮ ಹಳೆಯ ಮನೆಗಾಗಿ ಪಟ್ಟು ಹಿಡಿದಿದ್ದಾರೆ. ಸದ್ಯ ಸಿದ್ದರಾಮಯ್ಯ ಕೇಳಿರುವ ಈ ನಿವಾಸ ಸ್ಪೀಕರ್ ವಿಶ್ವೇಶ್ವರ ಕಾಗೇರಿಗೆ ಹಂಚಿಕೆಯಾಗಿದ್ದು, ಅದೇ ನಿವಾಸವನ್ನು ಸಿದ್ದರಾಮಯ್ಯಗೆ ಮರು ಹಂಚಿಕೆ ಮಾಡುತ್ತಾರಾ ಅಥವಾ ಸಿದ್ದರಾಮಯ್ಯ ಬೇಡಿಕೆಯನ್ನು ತಳ್ಳಿ ಹಾಕುತ್ತಾರಾ ಕಾದು ನೋಡಬೇಕಿದೆ.