ಬೆಂಗಳೂರು: ಸಾಹಿತಿ ಪ್ರೊ. ಕೆಎಸ್ ಭಗವಾನ್ ಮುಖಕ್ಕೆ ಇಂದು ವಕೀಲರೊಬ್ಬರು ಮಸಿ ಬಳಿದಿರುವ ಕೃತ್ಯವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿರುವ ಅವರು, ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಮುಖಕ್ಕೆ ವಕೀಲೆಯೊಬ್ಬರು ಮಸಿ ಬಳಿದ ದುಷ್ಕೃತ್ಯ ಖಂಡನೀಯ. ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಚರ್ಚೆ-ಸಂವಾದದ ಮೂಲಕ ಬಗೆಹರಿಸಿಕೊಳ್ಳಬೇಕೇ ವಿನಃ ಈ ರೀತಿಯ ಅಸಭ್ಯ ನಡವಳಿಕೆ ಮೂಲಕ ಅಲ್ಲ. ಪೊಲೀಸರು ತಕ್ಷಣ ವಕೀಲೆ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನ ಆಗ್ರಹಿಸಿದ್ದಾರೆ.
ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ ಹಿನ್ನೆಲೆ ವಿಚಾರಣೆಗಾಗಿ ಸಾಹಿತಿ ಭಗವಾನ್ ಇಂದು ಬೆಂಗಳೂರಿನ ಎರಡನೇ ಎಸಿಎಂಎಂ ನ್ಯಾಯಾಲಯಕ್ಕೆ ಆಗಮಿಸಿದ್ದರು. ಈ ಸಂದರ್ಭ ವಕೀಲೆ ಮೀರಾ ರಾಘವೇಂದ್ರ ಎಂಬುವವರು ಭಗವಾನ್ ಮುಖಕ್ಕೆ ಮಸಿ ಬಳಿದಿದ್ದಾರೆ. ಹಿಂದೂ ಧರ್ಮದವರಿಗೆ ಧಕ್ಕೆತಂದ ಹಿನ್ನೆಲೆ ಇವರೇ ಭಗವಾನ್ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು.
ಕೋರ್ಟ್ ವಿಚಾರಣೆ ಮುಗಿಸಿ ಹೊರ ಬಂದ ಭಗವಾನ್ ಮುಖಕ್ಕೆ ಮೀರಾ ಮಸಿ ಬಳಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರ ಈ ಕೃತ್ಯವನ್ನು ಪ್ರಗತಿಪರ ವ್ಯಕ್ತಿಗಳು ಹೋರಾಟಗಾರರು ತೀವ್ರವಾಗಿ ಖಂಡಿಸಿದ್ದು ಸಾಹಿತಿ ಭಗವಾನ್ ಆಗಿರುವ ಅನ್ಯಾಯಕ್ಕೆ ಸರ್ಕಾರ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.