ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ್ ಪರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಬ್ಬರದ ಪ್ರಚಾರ ಮಾಡಿ ಉಪಚುನಾವಣೆಯಲ್ಲಿ ಕೈ ಅಭ್ಯರ್ಥಿ ಶಿವರಾಜ್ ಕೈ ಹಿಡಿಯುವಂತೆ ಮತದಾರರಲ್ಲಿ ಸಿದ್ದರಾಮಯ್ಯ ಮನವಿ ಮಾಡಿದರು.
ಇದೇ ವೇಳೆ ಬಿಜೆಪಿ ವಿರುದ್ದ ಗುಡುಗಿದ ಸಿದ್ದು, ಪ್ರಧಾನಿ ಮೋದಿ ಸಬ್ ಕಾ ಸಾಥ್ ಸಬ್ ಕಾ ವಿಕಾಶ್ ಅಂತ ಹೇಳಿ ಅಧಿಕಾರಕ್ಕೆ ಬಂದು ,ದೇಶವನ್ನು ವಿನಾಶ ಮಾಡ್ತಿದ್ದಾರೆ ಎಂದರು. ನಮ್ಮ ಸರ್ಕಾರ ಇದ್ದಾಗ ಅನ್ನಭಾಗ್ಯ, ಶಾದಿ ಭಾಗ್ಯ, ಶಾಲೆ ಮಕ್ಕಳಿಗೆ ಮಧ್ಯಾಹ್ನ ಹಾಲು, ಹೈನುಗಾರಿಕೆ ಮಾಡುವವರಿಗೆ ಲೀಟರಿಗೆ ಐದು ರೂಪಾಯಿ ಸಬ್ಸಿಡಿ ಎಲ್ಲವನ್ನು ನಾವು ಕೊಟ್ಟಿದ್ದೇವೆ ಆದರೆ, ಯಡಿಯೂರಪ್ಪ ಏನು ಕೊಟ್ಟಿದ್ದಾರೆ ಎಂದರು.
ಚುನಾವಣೆ ನಂತರ ನಮ್ಮ ಸರ್ಕಾರ ಬರುತ್ತೆ, ಅನ್ನ ಭಾಗ್ಯ ಯೋಜನೆಯಲ್ಲಿ ಈಗ ಕೊಡ್ತಿರುವ 7 ಕೆಜಿ ಅಕ್ಕಿಯನ್ನು 10 ಕೆಜಿ ಗೆ ಹೆಚ್ಚಿಸಲಿದ್ದೇವೆ. ಆ ದ್ರೆ ಯಡಿಯೂರಪ್ಪ ಅನ್ನ ಭಾಗ್ಯಕ್ಕೆ ಕನ್ನ ಹಾಕಲು ರೆಡಿಯಾಗಿದ್ದಾರೆ. ಅಲ್ಲದೆ ಹಸಿವು ಮುಕ್ತ ರಾಜ್ಯ ಮಾಡುವ ಉದ್ದೇಶದಿಂದ ಐದು ರೂಪಾಯಿಗೆ ತಿಂಡಿ, 10 ರೂಪಾಯಿಗೆ ಊಟ ಕೊಡುವ ಇಂದಿರಾ ಕ್ಯಾಂಟಿನ್ ಜಾರಿಗರೆ ತರಲಾಗಿದ್ದು, ಈಗ ಯಡಿಯೂರಪ್ಪ ಇಂದಿರಾ ಕ್ಯಾಂಟೀನ್ ಮುಚ್ಚಲು ರೆಡಿಯಾಗಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಜೆಡಿಎಸ್ ಬಗ್ಗೆ ವ್ಯಂಗ್ಯವಾಡಿದ ಸಿದ್ದರಾಮಯ್ಯ, ಜೆಡಿಎಸ್ ಗೆ ಮತ ಹಾಕಿದರೆ ಏನು ಪ್ರಯೋಜನ ಇಲ್ಲ 25 ಸೀಟ್ ಗೆದ್ದು ಮಧ್ಯದಲ್ಲಿ ತೂರಿಕೊಳ್ತಾರೆ. ಕಳೆದ ಚುನಾವಣೆಯಲ್ಲಿ 37 ಸೀಟ್ ಗೆದ್ದಿದ್ದ ಜೆಡಿಎಸ್ಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟರೂ ಅವರು ನಮ್ಮನ್ನು ತೆಗಳೋದು ಬಿಟ್ಟಿಲ್ಲ. ಆದ್ದರಿಂದ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುವ ಬದಲು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ. ಶಿವರಾಜ್ ಉತ್ತಮ ಅಭ್ಯರ್ಥಿ ಮೂರು ಭಾರಿ ಕಾರ್ಪೋರೇಟರ್ ಆಗಿ ಈ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅದ್ದರಿಂದ ಈ ಬಾರಿ ಕೈ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಸಿದ್ದರಾಮಯ್ಯ ಮಹಾಲಕ್ಷ್ಮಿ ಲೇಔಟ್ ಮತದಾರರಲ್ಲಿ ಮನವಿ ಮಾಡಿದರು.
ಕಾಂಗ್ರೆಸ್ನ ಈ ಬಹಿರಂಗ ಪ್ರಚಾರದಲ್ಲಿ ಮಾಜಿ ಗೃಹಮಂತ್ರಿ ರಾಮಲಿಂಗಾರೆಡ್ಡಿ, ಮಾಜಿ ಸಚಿವ ಕೃಷ್ಣ ಭೈರೇಗೌಡ , ಎಚ್.ಎಮ್. ರೇವಣ್ಣ, ಬಾಲಕೃಷ್ಣ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. ಮಹಾಲಕ್ಷ್ಮಿ ಲೇಔಟ್ ಶಂಕರ್ ನಾಗ್ ಆಟೋ ನಿಲ್ದಾಣದಿಂದ ಶಂಕರ ಮಠದವರಗೂ ಭರ್ಜರಿ ರೋಡ್ ಶೋ ಮಾಡಿದ ಸಿದ್ದುಗೆ ಮಹಾಲಕ್ಷ್ಮಿ ಲೇಔಟ್ ಕೈ ಕಾರ್ಯಕರ್ತರು ಹೂಮಳೆ ಸುರಿಸಿ, ಅದ್ಧೂರಿಯಾಗಿ ಸ್ವಾಗತಿಸಿದರು.