ಬೆಂಗಳೂರು: ಕೇಂದ್ರ ಸರ್ಕಾರ ನೇಕಾರರ ಹಕ್ಕನ್ನು ಕಸಿದುಕೊಳ್ಳುತ್ತಿದ್ದು, ಇದು ದಮನಕಾರಿ ಪ್ರವೃತ್ತಿ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು, ಕೇಂದ್ರ ಸರ್ಕಾರ ಏಕಾಏಕಿ ಅಖಿಲ ಭಾರತ ಕರಕುಶಲ ಮಂಡಳಿ ಮತ್ತು ಅಖಿಲ ಭಾರತ ಕೈಮಗ್ಗ ಮಂಡಳಿಯನ್ನು ರದ್ದು ಪಡಿಸುವುದು ಉತ್ತಮ ನಿರ್ಧಾರವಲ್ಲ. ಇದು ಕೇಂದ್ರ ಜವಳಿ ಸಚಿವಾಲಯದ ಕಠಿಣ ನಿರ್ಧಾರವಾಗಿದೆ. ದೇಶಾದ್ಯಂತದ ನೇಕಾರ ಸಮುದಾಯಗಳ ಹಿತಾಸಕ್ತಿಗೆ ವಿರುದ್ಧವಾಗಿದೆ. ಮಂಡಳಿಗಳು ನೇಕಾರ ಸಮುದಾಯಗಳಿಗೆ ತಮ್ಮ ಕಾಳಜಿ ಮತ್ತು ಕುಂದುಕೊರತೆಗಳನ್ನು ವ್ಯಕ್ತಪಡಿಸಲು ಒಂದು ವೇದಿಕೆಯಾಗಿವೆ ಮತ್ತು ನೇಕಾರ ಸಮುದಾಯಗಳು ಮತ್ತು ಕರಕುಶಲ ಕೈಗಾರಿಕೆಗಳಿಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳು ಮತ್ತು ನೀತಿಗಳನ್ನು ರೂಪಿಸಲು ಸಲಹಾ ಸಂಸ್ಥೆಗಳಾಗಿ ಕಾರ್ಯನಿರ್ವಹಿಸಿದವು. ಇದೀಗ ಕೈಗೊಂಡ ನಿರ್ಧಾರದಿಂದಾಗಿ ಮಂಡಳಿಗಳು ಅಭಿವೃದ್ಧಿ ಪ್ರಕ್ರಿಯೆಗೆ ಅಡ್ಡಿಯಾಗಲಿದೆ. ಮಂಡಳಿಗಳನ್ನು ರದ್ದುಪಡಿಸುವುದು ನೇಕಾರ ಸಮುದಾಯಗಳ ಹಕ್ಕುಗಳು ಮತ್ತು ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದಿದ್ದಾರೆ.
ಕರಕುಶಲ ಮಂಡಳಿಯನ್ನು 1952 ರಲ್ಲಿ ಪುಪುಲ್ ಜಯಕರ್ ಸ್ಥಾಪಿಸಿದರು. ಅಖಿಲ ಭಾರತ ಕೈಮಗ್ಗ ಮಂಡಳಿಯನ್ನು 1992 ರ ಜನವರಿ 23 ರಂದು ರಚಿಸಲಾಯಿತು. ಇದು ನಿರುದ್ಯೋಗವನ್ನು ಕಡಿಮೆ ಮಾಡಲು ಬಹಳ ಪರಿಣಾಮಕಾರಿ ಎಂದು ಸಾಬೀತುಪಡಿಸಿತ್ತು. ಜವಳಿ ಮತ್ತು ಕೈಮಗ್ಗ ಕ್ಷೇತ್ರವು ಕೃಷಿಯ ನಂತರ ಭಾರತದಲ್ಲಿ ಜನರಿಗೆ ಉದ್ಯೋಗ ಒದಗಿಸಿರುವ ಎರಡನೇ ಅತಿದೊಡ್ಡ ಮೂಲವಾಗಿದೆ. ನಾಲ್ಕನೇ ಅಖಿಲ ಭಾರತ ಕೈಮಗ್ಗ ಜನಗಣತಿ ಪ್ರಕಾರ, ಭಾರತದಲ್ಲಿ 31.45 ಲಕ್ಷ ಕುಟುಂಬಗಳು ಕೈಮಗ್ಗ, ನೇಯ್ಗೆ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಈ ಮಂಡಳಿಗಳಿಗೆ 2020-21ರಲ್ಲಿ ನಿಗದಿಪಡಿಸಿದ ಅಂದಾಜು ಬಜೆಟ್ 485 ಕೋಟಿ ರೂ. ಇದೀಗ ಇವುಗಳನ್ನು ಮುಚ್ಚುವುದರಿಂದ ದೊಡ್ಡ ಕೊರತೆ ಎದುರಾಗಲಿದೆ. ಇದು 31.45 ಲಕ್ಷಕ್ಕೂ ಹೆಚ್ಚು ಕುಟುಂಬಗಳ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ಕೈಮಗ್ಗ ಮತ್ತು ನೇಯ್ಗೆಯನ್ನು ಅವಲಂಬಿಸಿರುವ 21 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ಜಾತಿಗಳಿಗೆ ಸೇರಿವೆ. ಇದರಿಂದ ಕೇಂದ್ರ ಸರ್ಕಾರ ಎಲ್ಲಾ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಪರಿಗಣನೆಗೆ ತೆಗೆದುಕೊಂಡು ಅನ್ಯಾಯಗಳನ್ನು ನಿವಾರಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮತ್ತು ಕ್ಷೇತ್ರವನ್ನು ಅವಲಂಬಿಸಿರುವ ಲಕ್ಷಾಂತರ ಜನರ ಹಿತದೃಷ್ಟಿಯಿಂದ ಮಂಡಳಿಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ನಾನು ನಿಮ್ಮನ್ನು ಬಲವಾಗಿ ಒತ್ತಾಯಿಸುತ್ತೇನೆ ಮತ್ತು ಅದನ್ನು ಇನ್ನಷ್ಟು ಬಲಪಡಿಸುವಂತೆ ವಿನಂತಿಸುತ್ತೇನೆ ಎಂದಿದ್ದಾರೆ.