ಬೆಂಗಳೂರು: ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರನ್ನು ಕರೆತರಲು ಸೂಕ್ತ ಕ್ರಮ ಕೈಗೊಳ್ಳಿ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪನವರಿಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಈ ವಿಚಾರವಾಗಿ ಸಿಎಂ ಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ನಾನು ಮೇ 29 ರಂದು ಯುರೋಪ್, ಅಮೆರಿಕ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ನೆಲಸಿರುವ ಕನ್ನಡಿಗರೊಂದಿಗೆ ವಿಡಿಯೋ ಸಂವಾದ ಮಾಡಿದೆ. ಈ ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಹೇಳಿದರು. ಇವರಲ್ಲಿ ಬಹುಪಾಲು ಜನರು ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್‌ಗಳು, ತಂತ್ರಜ್ಞರು ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರು ಇದ್ದಾರೆ. ಇವರೆಲ್ಲಾ ನಾಡಿಗೆ ಹೆಮ್ಮೆ ತರುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಬಹುಪಾಲು ಜನ ತಾಯ್ನಾಡಿಗೆ ವಾಪಸ್ಸಾಗಲು ಪ್ರಯತ್ನಿಸುತ್ತಿದ್ದಾರೆ. ಆದರೆ ವಾಪಸ್ಸಾಗುವ ಪ್ರಕ್ರಿಯೆಯಲ್ಲಿ ಹಲವು ರೀತಿಯ ತೊಡಕುಗಳನ್ನು ಎದುರಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.
ನೇರವಾಗಿ ಬರಲಾಗುತ್ತಿಲ್ಲ:
ನೆದರ್‌ಲ್ಯಾಂಡ್ ಮುಂತಾದ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಆಮ್‌ಸ್ಟರ್‌ಡ್ಯಾಂ ನಿಂದ ಬೆಂಗಳೂರಿಗೆ ನೇರವಾಗಿ ಬರಲಾಗುತ್ತಿಲ್ಲ. ಆ್ಯಮ್‌ಸ್ಟರ್‌ಡ್ಯಾಂ ನಿಂದ ವಿಮಾನಗಳು ದೆಹಲಿಗೆ ಮಾತ್ರ ಸಂಚರಿಸುತ್ತಿವೆ. ಹಾಗಾಗಿ ಈ ಪ್ರಯಾಣಿಕರು ದೆಹಲಿಗೆ ಬಂದು ಅಲ್ಲಿ ಕ್ಯಾರಂಟೈನ್‌ನಲ್ಲಿದ್ದು ಆ ನಂತರ ಬೆಂಗಳೂರಿಗೆ ಪ್ರಯಾಣ ಮಾಡಿ ಬೆಂಗಳೂರಿನಲ್ಲಿಯೂ ಸಹ ಕ್ವಾರಂಟೈನ್‌ನಲ್ಲಿ ಇರಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಆದ್ದರಿಂದ ಈ ಪ್ರಯಾಣಿಕರು ನೇರವಾಗಿ ಬೆಂಗಳೂರಿಗೆ ಬರಲು ಅಗತ್ಯ ಕ್ರಮ ಕಲ್ಪಿಸುವುದು ಅನಿವಾರ್ಯವಾಗಿದೆ ಎಂದು ವಿವರಿಸಿದ್ದಾರೆ.
ಲಕ್ಷಾಂತರ ಮಂದಿಗೆ ಸಮಸ್ಯೆ:
ಇದೇ ರೀತಿ ಅಮೆರಿಕ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಅಪಾರ ಸಂಖ್ಯೆಯ ಕನ್ನಡಿಗರು ನೆಲೆಸಿದ್ದಾರೆ. ಈ ದೇಶಗಳಿಂದ ಲಕ್ಷಗಟ್ಟಲೆ ಜನರು ರಾಜ್ಯಕ್ಕೆ ವಾಪಸ್ಸಾಗಲು ಉದ್ದೇಶಿಸಿದ್ದಾರೆ. ಇವರನ್ನು ಕರೆತರಲು ಸಾಕಷ್ಟು ಸಂಖ್ಯೆಯ ವಿಮಾನಗಳ ಸೌಲಭ್ಯ ಇರುವುದಿಲ್ಲ. ಈ ಬಗ್ಗೆ ವಿದೇಶಾಂಗ ಸಚಿವಾಲಯದೊಂದಿಗೆ ವ್ಯವಹರಿಸಿ ಈ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿದ್ದಾರೆ.
ಹೊರ ದೇಶಗಳಿಂದ ಬಂದ ಕನ್ನಡಿಗರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಅವರಲ್ಲಿ ಸೋಂಕಿತರಿದ್ದರೆ ಸೂಕ್ತ ರೀತಿಯ ಚಿಕಿತ್ಸೆ ನೀಡುವುದು. ಉಳಿದವರನ್ನು ಕ್ವಾರಂಟೈನ್‌ನಲ್ಲಿ ಇರಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಂಡು ಅನಿವಾಸಿ ಕನ್ನಡಿಗರ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಬೇಕೆಂದು ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.