ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಆಯ್ಕೆಯಾಗುವ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಶಾಸಕಾಂಗ ಸಭೆಯ ನಂತರ ಅಭ್ಯರ್ಥಿಗಳಾದ ಬಿ ಕೆ ಹರಿಪ್ರಸಾದ್ ಹಾಗೂ ನಜೀರ್ ಅಹಮದ್ ಗೆ ಬಿ ಫಾರಂ ವಿತರಿಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಪಕ್ಷದ ಹೈಕಮಾಂಡ್ ಆಯ್ಕೆಯನ್ನು ಸಮರ್ಥಿಸಿಕೊಂಡರು.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಮೇಲ್ಮನೆ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಿದ್ದೇವೆ. ಸುಮಾರು 270 ಅರ್ಜಿಗಳು ಬಂದಿದ್ದವು. ಎಲ್ಲವನ್ನು ಹೈಕಮಾಂಡಿಗೆ ಕಳುಹಿಸಿದ್ದೆವು. ಅಂತಿಮವಾಗಿ ಹೈಕಮಾಂಡ್ ಇಬ್ಬರನ್ನು ಆಯ್ಕೆ ಮಾಡಿದೆ. ನಜೀರ್ ಅಹಮದ್ ಹಾಗೂ ಬಿ ಕೆ ಹರಿಪ್ರಸಾದ್ ಒಮ್ಮತದ ಹಾಗೂ ಸಮರ್ಥ ಅಭ್ಯರ್ಥಿಗಳಾಗಿದ್ದಾರೆ ಎಂದರು.
ಬಿಜೆಪಿಯಲ್ಲಿ ಹೆಚ್ ವಿಶ್ವನಾಥ್ ಗೆ ಟಿಕೆಟ್ ತಪ್ಪಲು ತಾವು ಕಾರಣ ಎಂಬ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಹಾಗಾದರೆ ನಾನು ಬಿಜೆಪಿ ಹೈಕಮಾಂಡ್ ಎಂದು ವಿಶ್ವನಾಥ್ ಹೇಳಿಕೆಗೆ ಟಾಂಗ್ ಕೊಟ್ಟರು.
ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ವಿಧಾನಪರಿಷತ್ ಆಯ್ಕೆಗೆ ಇನ್ನೂರಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದರು. ನಾವು ಚರ್ಚಿಸಿ ಅಂತಿಮವಾಗಿ ಮೂರು ನಾಲ್ಕು ಸಮುದಾಯದವರನ್ನು ಪರಿಗಣಿಸಿದ್ದರು. ಪಕ್ಷದ ಹೈಕಮಾಂಡ್ ಒಬ್ಬ ಹಿರಿಯ ನಾಯಕರಿಗೆ ಟಿಕೆಟ್ ನೀಡಿದೆ. ನಮ್ಮ ಸಲಹೆಯನ್ನು ಪರಿಗಣಿಸಿ ಹೈಕಮಾಂಡ್ ಆಯ್ಕೆ ಮಾಡಿದೆ. ರಾಜಕಾರಣದಲ್ಲಿ ಬಿ ಕೆ ಹರಿಪ್ರಸಾದ್ ನನಗಿಂತ ಹಿರಿಯರು. ಉತ್ತಮ ಅಭ್ಯರ್ಥಿಯನ್ನು ಹೈಕಮಾಂಡ್ ಆಯ್ಕೆ ಮಾಡಿದೆ. ವಿಧಾನಸಭೆ, ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಗಳಿಗೆ ಯುವ ಮುಖಗಳಿಗೆ ಅವಕಾಶ ನೀಡುತ್ತೇವೆ. ಮೇಲ್ಮನೆಗೆ ಹಿರಿಯ ಹಾಗೂ ಅನುಭವಿಗಳೇ ಅಗತ್ಯ ಎಂದು ಅಭಿಪ್ರಾಯಪಟ್ಟರು.