ಬೆಂಗಳೂರು: ಸಿದ್ದರಾಮಯ್ಯ ಈಗ ಸವಕಲು ನಾಣ್ಯ ಆಗಿದ್ದಾರೆ. ಅವರಿಗೆ ಅವರ ಪಕ್ಷದಲ್ಲೇ ಮಾನ್ಯತೆ ಸಿಗುತ್ತಿಲ್ಲ. ಅವರ ಪಕ್ಷದ ನಾಯಕರೇ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಜೆಡಿಎಸ್ ಜತೆ ಬಿಜೆಪಿ ಹೊಂದಾಣಿಕೆ ಮಾಡಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿ ಯಾವ ಪಕ್ಷದ ಜೊತೆಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಜೊತೆಯಲ್ಲಿ ಸರ್ಕಾರ ಮಾಡಿ ಈ ರೀತಿ ಹೇಳುವುದು ಹಾಸ್ಯಾಸ್ಪದ. ಇತ್ತೀಚೆಗೆ ಸಿದ್ದರಾಮಯ್ಯನವರು ಹಿಟ್ ಆ್ಯಂಡ್ ರನ್ ಹೇಳಿಕೆ ಕೊಡುತ್ತಾರೆ. ಒಳ ಒಪ್ಪಂದ ಮಾಡಿಕೊಂಡಿದ್ದರೆ ಜೆಡಿಎಸ್ ಶಾಸಕರು ಯಾಕೆ ರಾಜೀನಾಮೆ ನೀಡುತ್ತಿದ್ದರು? ಹಾಗಾಗಿದ್ದರೆ ಕಾಂಗ್ರೆಸ್ ಶಾಸಕರು ಮಾತ್ರ ರಾಜೀನಾಮೆ ನೀಡುತ್ತಿದ್ದರು. ಅವರ ತಪ್ಪಿನಿಂದ ಅಸಮಾಧಾನಗೊಂಡು ರಾಜೀನಾಮೆ ಕೊಟ್ಟಿದ್ದಾರೆ ಎಂದು ಟಾಂಗ್ ನೀಡಿದರು.
ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾಳೆ ಕೋರ್ಟ್ ತೀರ್ಪು ನಂತರ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ನಿರ್ಧಾರವಾಗಲಿದೆ. ವರಿಷ್ಠರು ಎಲ್ಲವನ್ನೂ ತೀರ್ಮಾನ ಮಾಡುತ್ತಾರೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಸಣ್ಣಪುಟ್ಟ ಗೊಂದಲ ಸಹಜ, ಎಲ್ಲವೂ ಸರಿ ಹೋಗುತ್ತದೆ ಎಂದು ಸ್ಪಷ್ಟಪಡಿಸಿದರು.
ಕಾವೇರಿ ಸಾಫ್ಟ್‌ವೇರ್ ತಿರುಚಿದ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಅವರು, ನಿವೇಶನ ತೆಗೆದುಕೊಳ್ಳುವವರಿಗೆ ಮೋಸ ಮಾಡಿ ಅಕ್ಷಮ್ಯ ಅಪರಾಧ ಎಸಗಿದ್ದಾರೆ. ಹಿಂದೆ ಕೂಡ ಈ ರೀತಿ ನಡೆದಿತ್ತು. ಆಗ ಸಬ್ ರಿಜಿಸ್ಟ್ರಾರ್ಗಳನ್ನು ಸಸ್ಪೆಂಡ್ ಮಾಡಿದ್ದರು. ಅಕ್ರಮ ಬಡಾವಣೆ, ನಿವೇಶನಗಳಿಗೆ ನಕಲಿ ದಾಖಲೆ ಸೃಷ್ಟಿಸಿ ದ್ರೋಹ ಮಾಡಿದ್ದಾರೆ ಎಂದರು.
ಒಂದೊಂದು ನೋಂದಣಿಗೂ 20-30 ಸಾವಿರ ದುಡ್ಡು ತೆಗೆದುಕೊಳ್ತಾರೆ. ಇದರಲ್ಲಿ ಕೋಟ್ಯಂತರ ರೂ. ಅವ್ಯವಹಾರ ಆಗಿದೆ. ಸ್ಮಶಾನ, ಕೆರೆ ಜಾಗ, ಸರ್ಕಾರಿ ಜಮೀನನ್ನೂ ಸ್ವಾಹ ಮಾಡಿದ್ದಾರೆ ಎಂದು ಟೀಕಿಸಿದ್ರು.