ಬೆಂಗಳೂರು: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನಲ್ಲಿ 600 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದಷ್ಟು ವಸೂಲಾತಿಯಾಗದ ಸಾಲ (ಎನ್ಪಿಎ) ಬಾಕಿ ಉಳಿದುಕೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕು ಈ ಸಹಕಾರಿ ಬ್ಯಾಂಕಿಗೆ, ಆರು ತಿಂಗಳವರೆಗೆ ವಿವಿಧ ನಿರ್ಬಂಧಗಳನ್ನು ಹೇರಿದೆ.
ಒಬ್ಬ ಗ್ರಾಹಕರು ಆರು ತಿಂಗಳಲ್ಲಿ 35 ಸಾವಿರ ರೂಗಿಂತ ಹೆಚ್ಚು ಹಣ ವಿತ್ಡ್ರಾ ಮಾಡುವಂತಿಲ್ಲ ಎಂದೂ ಸೂಚಿಸಿದ್ದು, ಬ್ಯಾಂಕಿನ ಗ್ರಾಹಕರು ಎಷ್ಟೇ ಠೇವಣಿ ಇಟ್ಟಿದ್ದರೂ, ಮುಂದಿನ ಸೂಚನೆವರೆಗೂ ಕೇವಲ 35,000 ರೂಪಾಯಿ ಅಷ್ಟೇ ಹಿಂಪಡೆಯಬಹುದು.
ಸದ್ಯಕ್ಕೆ ಈಗ ಬ್ಯಾಂಕ್ ಆಡಳಿತ ಮಂಡಳಿ ನಗರದ ಆರ್ಬಿಐ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದು, ಹೇರಿದ ನಿರ್ಬಂಧಗಳನ್ನು ಸಡಿಲಿಕೆ ಮಾಡಲು ಬ್ಯಾಂಕ್ ಆಡಳಿತ ಮಂಡಳಿ ಮನವಿಯನ್ನು ಮಾಡುತ್ತಿದೆ. ಸಭೆಯ ನಂತರ ಬ್ಯಾಂಕ್ ಆಡಳಿತ ಮಂಡಳಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಬ್ಯಾಂಕ್ನ ಗ್ರಾಹಕರಾದ ರಾಮಚಂದ್ರು ಮಾತನಾಡಿ, ನಮಗೆ ಬ್ಯಾಂಕ್ ಮೇಲೆ ಪೂರ್ಣ ವಿಶ್ವಾಶವಿದೆ. ನಾನು 7 ಲಕ್ಷ ರೂಪಾಯಿ ಠೇವಣಿಯನ್ನು ಇಟ್ಟಿದ್ದೇನೆ. ಸಮಯಕ್ಕೆ ಸರಿಯಾಗಿ ಬ್ಯಾಂಕ್ ಬಡ್ಡಿಯನ್ನು ನೀಡುತ್ತಿತ್ತು. ಕೆಲ ತಪ್ಪುಗಳಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಹಣ ಸುರಕ್ಷಿತವಾಗಿ ಇರುತ್ತದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.