ಬೆಂಗಳೂರು: ಇಂದು ತ್ರಿಪುರಾಗೆ ಹನ್ನೊಂದು ಗಂಟೆ ಸುಮಾರಿಗೆ ಸಿಲಿಕಾನ್ ಸಿಟಿಯಿಂದ ಶ್ರಮಿಕ್ ರೈಲು ತೆರಳಲಿದ್ದು, ಹೀಗಾಗಿ ಪೊಲೀಸರು ತ್ರಿಪುರಾಗೆ ತೆರಳುವ ಕಾರ್ಮಿಕರನ್ನು ಪತ್ತೆ ಹಚ್ಚಿ ಅರಮನೆ ಮೈದಾನದ ಬಳಿ ಸೇರಿಸಿದ್ದಾರೆ. ಇದರಲ್ಲಿ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು ಇದ್ದು, ನೂರಾರು ಸಂಖ್ಯೆಯಲ್ಲಿ ತ್ರಿಪುರ ನಿವಾಸಿಗಳು ಜಮಾಯಿಸಿದ್ದಾರೆ.
ಸಿಲಿಕಾನ್ ಸಿಟಿಗೆ ತ್ರಿಪುರಾದಿಂದ ಬಹುತೇಕ ಮಂದಿ ಉದ್ಯೋಗ ಅರಸಿ, ವಿದ್ಯಾಭ್ಯಾಸಕ್ಕೆ, ವ್ಯಾಪಾರಕ್ಕೆ ಆಗಮಿಸಿ ಇಲ್ಲಿ ವಾಸವಿದ್ದರು. ಆದರೆ ಕೊರೊನಾ ದಿಂದಾಗಿ ತತ್ತರಿಸಿದ ಇವರು ತಮ್ಮ ಹುಟ್ಟೂರಿಗೆ ತೆರಳಲು ನಿರ್ಧಾರ ಮಾಡಿದ್ದರು, ಅಂತಹವರಿಗೆ ಸರ್ಕಾರ ರೈಲಿನ ವ್ಯವಸ್ಥೆ ಕಲ್ಪಿಸಿದೆ. ಇನ್ನು ಕೆಲವರು ಪೊಲೀಸರ ಸಹಾಯ ಪಡೆದು ತಮ್ಮ ಊರುಗಳಿಗೆ ಹೊರಟಿದ್ದಾರೆ.
ಸರ್ಕಾರ ಈಗಾಗ್ಲೇ ರೈಲಿನ ವ್ಯವಸ್ಥೆ ಮಾಡಿದ್ದು, ನಗರ ಪೊಲೀಸರು ಕಾರ್ಮಿಕರಿಗೆ ಸಹಾಯ ಹಸ್ತ ಚಾಚುವಂತೆ ಸೂಚಿಸಿದ್ದಾರೆ. ಹಿಗಾಗಿ ನಗರದ ಏಳು ವಿಭಾಗದ ಡಿಸಿಪಿಗಳು ತಮ್ಮ ವ್ಯಾಪ್ತಿಯಲ್ಲಿನ ವಲಸೆ ಕಾರ್ಮಿಕರು ಊರಿಗೆ ಹೋಗಲು ಇಚ್ಚೆ ಪಡುವವರನ್ನ ಪತ್ತೆ ಮಾಡಿ ಅವರಿಗೆ ಸಹಾಯ ಮಾಡುತ್ತಿದ್ದಾರೆ. ಹಾಗೆ ಇಲ್ಲಿಂದ ಹೊರಡುತ್ತಿರುವವರಿಗೆ ಆರೋಗ್ಯ ತಪಾಸಣೆ ಮಾಡಿ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಿದ್ದಾರೆ.