ಬೆಂಗಳೂರು: ಪೊಲೀಸ್ ಇಲಾಖೆಯಿಂದ ವಿಶೇಷ ಗಸ್ತು ಕರ್ತವ್ಯಕ್ಕೆ 'ಶೌರ್ಯ ವಾಹಿನಿ' ಎಂಬ ಮಹಿಳಾ ಗಸ್ತು ಪಡೆಗೆ ಆಗ್ನೇಯ ವಿಭಾಗದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಚಾಲನೆ ನೀಡಿದರು.
ಏನಿದು ಶೌರ್ಯ ವಾಹಿನಿ :
ಇದು ಮಹಿಳೆಯರೆ ನಿರ್ವಹಿಸುವ ಪಡೆಯಾಗಿದ್ದು, ಆಗ್ನೇಯ ವಿಭಾಗದಲ್ಲಿ ಮಹಿಳೆ ಹಾಗೂ ಮಕ್ಕಳ, ಸಾರ್ವಜನಿಕರ ಸಂರಕ್ಷಣೆಗಾಗಿ ಸುಮಾರು 25ಜನ ಮಹಿಳಾ ಸಿಬ್ಬಂದಿ ನಾಲ್ಕು ಚಕ್ರದ ಹೊಯ್ಸಳ ಹಾಗೂ ಚೀತಾ ಬೈಕ್ಗಳನ್ನು ಚಾಲನೆ ಮಾಡುತ್ತಾ ಮಹಿಳಾ ಪೇದೆಗಳು ಗಸ್ತು ತಿರುಗಲಿದ್ದಾರೆ. ಈ ತಂಡ ಪುರುಷ ಪೇದೆಯರಂತೆ ಮಹಿಳೆಯರ ಮತ್ತು ಮಕ್ಕಳ ಸಂರಕ್ಷಣೆಗೆ ರಾತ್ರಿ ಹಗಲು ಎನ್ನದೇ ಕೆಲಸ ನಿರ್ವಹಿಸಲಿದ್ದಾರೆ. ಇನ್ನು ಇವರಿಗೆ ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂಥ್ ಕೂಡ ಬೆಂಬಲ ನೀಡಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಮಹಿಳೆಯರಿಗೆ ನಮ್ಮ ಮೊದಲ ಆದ್ಯತೆ. ನಗರ ತುಂಬಾ ಸೇಫ್ ಆಗಿದೆ ಎಂದು ಮಹಿಳೆಯರೇ ತಿಳಿದುಕೊಳ್ಳಬೇಕು. ಸದ್ಯ ಪೊಲೀಸ್ ಇಲಾಖೆ ನಗರದಲ್ಲಿ ಮಹಿಳೆಯರ ಸುರಕ್ಷತೆಗೆ ಬಹಳ ಕಾರ್ಯಕ್ರಮ ಜಾರಿಗೊಳಿಸಲಾಗಿದ್ದು, ಮಹಿಳೆಯರ ರಕ್ಷಣೆಗೆ ಇನ್ನಷ್ಟು ಕ್ರಮ ಕೈಗೊಳ್ಳಲಾಗುವುದು ಎಂದರು.
ನಟಿ ಪ್ರೇಮ ಮಾತನಾಡಿ, ಪೊಲೀಸ್ ಇಲಾಖೆ ಈ ರೀತಿಯ ನೂತನ ಯೋಜನೆ ಜಾರಿಗೆ ತಂದಿರುವುದು ಖುಷಿಯಾಗಿದೆ. ಕೆಲವೊಮ್ಮೆ ನಾನು ಕ್ಯಾಬ್ನಲ್ಲಿ ಹೊಗಬೇಕಾದರೆ ಎಲ್ಲಿ ಏನಾಗುತ್ತದೆಯೋ ಎಂಬ ಭಯ ಕಾಡುತ್ತದೆ. ಆದರೆ, ಇದೀಗ ಮಹಿಳೆಯರೇ ಹೊಯ್ಸಳ ವಾಹನದ ಮೂಲಕ ರಕ್ಷಣೆಗೆ ಮುಂದಾಗಿರುವುದು ಹೆಮ್ಮೆ ಅನಿಸುತ್ತದೆ ಎಂದು ಹೇಳಿದರು.