ಬೆಂಗಳೂರು: ಬಿಲ್ ಬಾಕಿಯಿಂದಾಗಿ ಹಣವಿಲ್ಲದೇ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಗುತ್ತಿಗೆದಾರ ಅಂಬಿಕಾಪತಿ ದಂಪತಿ ನಿವಾಸದಲ್ಲಿ ಕೋಟಿ ಕೋಟಿ ಹಣ ಹೇಗೆ ಬಂತು? ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ನಮ್ಮ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ವ್ಯಕ್ತಿಯ ನಿವಾಸದಲ್ಲಿ ಪತ್ತೆಯಾಗಿರುವ ಕೋಟಿಗಟ್ಟಲೆ ಹಣದ ಮೂಲ ಏನು ಎನ್ನುವುದು ಬಹಿರಂಗವಾಗಬೇಕು ಎಂದು ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ ಆಗ್ರಹಿಸಿದ್ದಾರೆ.
ಖಾಸಗಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುತ್ತಿಗೆದಾರ ಅಂಬಿಕಾಪತಿ ದಂಪತಿ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. ಕಪ್ಪು ಹಣ ಪತ್ತೆ ಹಚ್ಚಲು ಐಟಿ ದಾಳಿಗಳು ಅಗತ್ಯ. ಅಂಬಿಕಾಪತಿ ಸೇರಿ ಕೆಲವು ಗುತ್ತಿಗೆದಾರರಿಗೂ ರಾಜಕಾರಣಿಗಳಿಗೂ ಲಿಂಕ್ ಇದೆ. ಈಗಿನ ಸಂದರ್ಭದಲ್ಲಿ ಗುತ್ತಿಗೆದಾರರ ಬಳಿ ಹಣ ಇಲ್ಲ. ಬಾಕಿ ಬಿಲ್ಗಳು ಬರದೇ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿಯನ್ನು ಈ ಸರ್ಕಾರ ನಿರ್ಮಿಸಿದೆ. ಅಂತಹ ಪರಿಸ್ಥಿತಿ ಇರುವಾಗ ಇವರ ಬಳಿ 42 ಕೋಟಿ ನಗದು ಹೇಗೆ ಬಂತು? ಈ ಹಣದ ಮೂಲ ಏನು ಅನ್ನೋದು ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಈಗ ದಾಳಿ ಆಗಿರುವ ಕಲೆಕ್ಷನ್ ಸೆಂಟರ್ ಇನ್ನೂ ಹಲವು ಕಡೆ ಇದೆ. ಈ ಸರ್ಕಾರಕ್ಕೂ ಈ ತರದ ಹಣ ಕಲೆಕ್ಷನ್ ಸೆಂಟರ್ಗಳಿಗೂ ಸಂಬಂಧ ಇದೆ. ಈಗ ಸಿಕ್ಕಿರುವ ಕೋಟಿ ಕೋಟಿ ಹಣದ ಬಗ್ಗೆ ಸೂಕ್ತ ತನಿಖೆ ಆಗಬೇಕಿದೆ. ಕಾಂಗ್ರೆಸ್ ಸರ್ಕಾರ ಎಟಿಎಂ ಗವರ್ನಮೆಂಟ್ ಆಗಿದೆ, ಲೂಟಿ ಸರ್ಕಾರವಾಗಿದೆ. ಪಂಚರಾಜ್ಯಗಳ ಚುನಾವಣೆಗೆ ಎಟಿಎಂ ಸರ್ಕಾರ ಫಂಡಿಂಗ್ ಮಾಡುತ್ತಿದೆ ಅನ್ನೋ ಆಪಾದನೆ ಇದೆ. ಈ ಆಪಾದನೆ ಹಿನ್ನೆಲೆಯಲ್ಲಿ ಈಗ ರೇಡ್ ಆಗಿದೆ ಎಂದರು.
ಅಂಬಿಕಾಪತಿ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಶೇ 40ರಷ್ಟು ಕಮಿಷನ್ ಆರೋಪ ಮಾಡಿದ್ದರು. ನಮ್ಮ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಲಾಗಿತ್ತು ದಾಖಲೆ ಇಲ್ಲದೇ, ಸಾಕ್ಷಿ ಇಲ್ಲದ ಆರೋಪ ಅದು. ಈಗ ಇಷ್ಟು ಹಣ ಸಿಕ್ಕಿದೆಯಲ್ಲ ಯಾರು ಶೇ 40ರಷ್ಟು ಹಾಗೂ ಯಾರು ನೂರರಷ್ಟು ಕಮಿಷನ್ ಪಡೆದಿದ್ದಾರೆ ಎಂದು ಗೊತ್ತಾಗಿದೆ. ಕಾಂಗ್ರೆಸ್ನವರೇ 40ರಷ್ಟು ಕಮಿಷನ್ ಪಡೆದಿದ್ದಾರೆ ಅನ್ನೋದು ಎದ್ದು ಕಾಣುತ್ತಿದೆ. ಈಗಿನ ಐಟಿ ದಾಳಿ ಬಗ್ಗೆ ಕಾಂಗ್ರೆಸ್ ನಾಯಕರು ಮಾತಮಾಡಲಿ ಎಂದರು.
ಕಾಂಗ್ರೆಸ್ನವರು ಅಧಿಕಾರಕ್ಕೆ ಬರುತ್ತಿದ್ದ ಹಾಗೆ ಬರ, ನೀರಿನ ಕೊರತೆ, ಲೂಟಿ, ವಿದ್ಯುತ್ ಅಭಾವ ಬರುತ್ತದೆ. ರಾಜ್ಯಕ್ಕೆ ಕಾಂಗ್ರೆಸ್ ಬಂದರೆ ದಾರಿದ್ರ್ಯ ಬರುತ್ತದೆ. ಈ ದೇಶಕ್ಕೆ ಕಾಂಗ್ರೆಸ್ ಒಂದು ಶಾಪ. ಇವರು ಅಧಿಕಾರಕ್ಕೆ ಬಂದರೆ ಕತ್ತಲೆ ಭಾಗ್ಯ ಬರುತ್ತದೆ. ಕಾನೂನು ಸುವ್ಯವಸ್ಥೆ ಹದಗೆಡುತ್ತದೆ, ಭ್ರಷ್ಟಾಚಾರ ತಾಂಡವ ಆಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಶಾಸಕ ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದರು.
ಬಿಜೆಪಿ, ಜೆಡಿಎಸ್ನ 42 ಮುಖಂಡರು ಕಾಂಗ್ರೆಸ್ ಸೇರಲು ಅರ್ಜಿ ಹಾಕಿದ್ದಾರೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥನಾರಾಯಣ ಕಾಂಗ್ರೆಸ್ ಮುಳುಗುತ್ತಿರುವ ಪಕ್ಷ. ಅವರ ಪಕ್ಷದ ಶಾಸಕರೇ ಅವರ ಸರ್ಕಾರದ ಅಸ್ತಿತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ಎಷ್ಟು ದಿನ ಸರ್ಕಾರ ಉಳಿಯುತ್ತೆ ಅಂತ ಅವರ ಶಾಸಕರೇ ಮಾತಾಡ್ತಿದ್ದಾರೆ.
ಸರ್ಕಾರದಲ್ಲಿ ಶಾಸಕರಿಗೆ ಗೌರವ ಸಿಗುತ್ತಿಲ್ಲ, ಸಹಕಾರ ಸಿಗುತ್ತಿಲ್ಲ ಅಂತ ನಿತ್ಯ ಆರೋಪವನ್ನು ಅವರೇ ಮಾಡುತ್ತಿದ್ದಾರೆ. ವರ್ಷಕ್ಕೆ ಒಬ್ಬ ಸಿಎಂ, ನಾಲ್ಕು ಡಿಸಿಎಂ, ಮಂತ್ರಿ ಆಗಬೇಕು ಅಂತ ಅವರವರಲ್ಲೇ ಮಾತನಾಡಿಕೊಳ್ಳುತ್ತಿದ್ದಾರೆ. ಮುಳುಗುವ ಹಡಗು ಕಾಂಗ್ರೆಸ್, ಅದಕ್ಕೆ ಭವಿಷ್ಯ ಇಲ್ಲ ಇಂತಹ ಮುಳುಗುವ ಪಕ್ಷಕ್ಕೆ ಯಾರೂ ಸೇರಲ್ಲ ಎಂದರು.
ಇದನ್ನೂ ಓದಿ: ಮಾಜಿ ಕಾರ್ಪೊರೇಟರ್ ಸಂಬಂಧಿ ಮನೆಯಲ್ಲಿ ಐಟಿ ದಾಳಿ.. 40 ಕೋಟಿಗೂ ಹೆಚ್ಚು ನಗದು ಪತ್ತೆ!