ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದ್ದು, ಕೊಲೆಯತ್ನ ಪ್ರಕರಣದ ಪ್ರಮುಖ ಆರೋಪಿ ಕುಮಾರ್ ಎಂಬಾತನ ಕಾಲಿಗೆ ಪೊಲೀಸರು ಶೂಟ್ ಮಾಡಿದ್ದಾರೆ.
ಚಂದ್ರು ಎಂಬುವವರು ಕುಮಾರ್ಗೆ ತಮ್ಮ ಮನೆಯನ್ನ ಬಾಡಿಗೆಗೆ ಕೊಟ್ಟಿದ್ದರು. ಈ ವೇಳೆ ಪುಂಡಾಟ ಮೆರೆದಿದ್ದ ಕುಮಾರ್ ಮನೆ ಬಾಡಿಗೆಯನ್ನ ನೀಡದೆ ಹೆದರಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಚಂದ್ರು ಅವರು ಮಾರತಹಳ್ಳಿ ಠಾಣೆಯಲ್ಲಿ ದೂರು ನೀಡಿ, ಮನೆ ಖಾಲಿ ಮಾಡಿಸಿದ್ದರು.
![Cops shoot the accused](https://etvbharatimages.akamaized.net/etvbharat/prod-images/6401774_bin.png)
ಇದೆ ದ್ವೇಷವಿಟ್ಟುಕೊಂಡಿದ್ದ ಆರೋಪಿ ಕುಮಾರ ತನ್ನ ಸಹಚರರೊಂದಿಗೆ ಮಾರ್ಚ್ 3ರಂದು ನಗರದ ದೇವರಬೀಸನಹಳ್ಳಿಯ ಫ್ಲಿಫ್ ಕಾರ್ಟ್ಗೇಟ್ ಬಳಿ ಚಂದ್ರು ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಆದ್ರೆ ಕೊನೆ ಹಂತದಲ್ಲಿ ಗನ್ ಕೈ ಕೊಟ್ಟು, ಪ್ಲಾನ್ ಫ್ಲಾಪ್ ಆಗಿ ಅಲ್ಲಿಂದ ಎಸ್ಕೇಪ್ ಆಗಿದ್ದ. ಈ ವೇಳೆ ಚಂದ್ರನ ಸ್ನೇಹಿತ ಉದಯ್ ಎಂಬಾತನಿಗೆ ಗಂಭೀರ ಗಾಯಗಳಾಗಿತ್ತು. ತಕ್ಷಣ ಚಂದ್ರು ವೈಟ್ ಫೀಲ್ಡ್ ಪೊಲೀಸರಿಗೆ ದೂರು ನೀಡಿದ್ದರು.
ಮತ್ತೆ ಚಂದ್ರು ಅವರನ್ನು ಹತ್ಯೆ ಮಾಡಲು ಆರೋಪಿ ಸಂಚು ರೂಪಿಸಿದ್ದ. ಈ ಮಾಹಿತಿ ತಿಳಿದ ಪೊಲೀಸರು ಆರೋಪಿಯನ್ನ ಬಂಧಿಸಲು ವಿಶೇಷ ತಂಡ ರಚನೆ ಮಾಡಿದ್ದರು. ಆರೋಪಿಗಳು ವರ್ತೂರಿನ ಗುಂಜೂರು ಪಾಳ್ಯದ ಬಳಿ ಇದ್ದ ಮಾಹಿತಿ ತಿಳಿದು ಬಂಧಿಸಲು ಮುಂದಾಗಿದ್ದರು. ಈ ವೇಳೆ ಕುಮಾರ್ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾನೆ. ಆತ್ಮರಕ್ಷಣೆಗಾಗಿ ಮಾರತಹಳ್ಳಿ ಇನ್ಸ್ಪೆಕ್ಟರ್ ರಮೇಶ್. ಜೆ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.
ಗಾಯಗೊಂಡ ಆರೋಪಿ ಕುಮಾರ್ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.