ಬೆಂಗಳೂರು: ಸಿಲಿಕಾನ್ ಸಿಟಿಯ ಹೃದಯ ಭಾಗದಲ್ಲಿರುವ ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ನಿತ್ಯ ನೂರಾರು ಹೆರಿಗೆಗಳು ನಡೆಯುತ್ತವೆ. ಈ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಉತ್ತಮ ವೈದ್ಯರಿದ್ದಾರೆ. ಆದ್ರೆ, ಅಗತ್ಯವಾಗಿ ಬೇಕಾಗಿರುವ ಹಾಸಿಗೆಗಳೇ ಇಲ್ಲ. ಹಾಗಾಗಿ ರೋಗಿಗಳು ಪರದಾಡುವಂತಾಗಿದೆ.
ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಬೆಡ್‌ಗಳಿಗೆ ಬರ ಬಂದಿದ್ದು, ಐಸಿಯು ವಾರ್ಡ್‌ನಲ್ಲಿ ಒಂದು ಬೆಡ್‌ನಲ್ಲಿ ಇಬ್ಬರಿಂದ- ಮೂವರು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ರೀತಿಯ ಬೆಡ್ ಶೇರಿಂಗ್‌ನಿಂದ ಮಕ್ಕಳಲ್ಲಿ ನ್ಯುಮೋನಿಯಾ ಹೆಚ್ಚುತ್ತಿದೆ ಅಂತ ಪೋಷಕರಲ್ಲಿ ಆತಂಕ ಸೃಷ್ಟಿಯಾಗಿದೆ.
ಆಸ್ಪತ್ರೆಯಲ್ಲಿ ವೈದ್ಯರು ಕಾಳಜಿ ವಹಿಸಿ ಚಿಕಿತ್ಸೆ ನೀಡುತ್ತಾರೆ. ಆದರೆ ಒಂದೇ ಹಾಸಿಗೆಯಲ್ಲಿ 2-3 ಮಕ್ಕಳನ್ನು ಮಲಗಿಸಿದ್ರೆ, ಬೇಗ ಇನ್ಫೆಕ್ಷನ್ ಆಗುತ್ತೆ ಅಂತಾರೆ ಪೋಷಕರು. ಶಿಶುವಿನ ಆರೋಗ್ಯದ ದೃಷ್ಟಿಯಿಂದ ಹಾಸಿಗೆಗಳು ಅನಿವಾರ್ಯವಾಗಿದ್ದು, ಅಗತ್ಯಕ್ಕೆ ತಕ್ಕಂತೆ ಪೂರೈಸಲು ಪೋಷಕರು ಮನವಿ ಮಾಡುತ್ತಿದ್ದಾರೆ.
ನ್ಯುಮೋನಿಯಾ ಕಾಯಿಲೆ 5 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳಲಿದ್ದು, ಇದರಿಂದ ಲಕ್ಷಾಂತರ ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಈಗಾಗಲೇ ಆಸ್ಪತ್ರೆಯಲ್ಲಿ ಬೆಡ್ ಶೇರಿಂಗ್‌ನಿಂದ ಮಕ್ಕಳಲ್ಲಿ ಕಾಯಿಲೆ ಹರಡುತ್ತಿದ್ದು, ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಕೆಮ್ಮು, ಉಸಿರಾಟ ಹಾಗ ಮತ್ತಿತರ ನಿತ್ಯ ಬಳಸುವ ವಸ್ತುಗಳಿಂದಲೂ ರೋಗ ಹರಡುವುದು ಸಾಮಾನ್ಯವಾಗಿದೆ.
ಈ ಸಂಬಂಧ ವಾಣಿ ವಿಲಾಸ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಗೀತಾ ಶಿವಮೂರ್ತಿ ಅವರನ್ನು ಸಂಪರ್ಕಿಸಿದರೆ ಅವರು ಉತ್ತರಿಸಲು ನಿರಾಕರಿಸಿದ್ರು. ಇತ್ತ ಆರೋಗ್ಯ ಸಚಿವರು ಸಚಿವರಾದಗಿನಿಂದಲೂ ಖಾಸಗಿ ಆಸ್ಪತ್ರೆಗಳ ಕಡೆ ಮುತುವರ್ಜಿ ವಹಿಸಿದಷ್ಟೂ, ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಗಮನಹರಿಸಿಲ್ಲ ಎಂಬ ಆರೋಪವಿದೆ.