ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ತಡರಾತ್ರಿ ಮತ್ತೆ ಪೊಲೀಸರ ಗುಂಡಿನ ಸದ್ದು ಕೇಳಿ ಬಂದಿದೆ. ಕಾಟನ್ ಪೇಟೆ ಹಾಗೂ ಚಾಮರಾಜಪೇಟೆ ರೌಡಿಶೀಟರ್ ಅನಿಲ್(32) ಎಂಬಾತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಚಾಮರಾಜಪೇಟೆ ಠಾಣೆಯ ಠಾಣೆ ವ್ಯಾಪ್ತಿಯ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಆರೋಪಿ ಅನಿಲ್, ಕಳೆದೊಂದು ತಿಂಗಳಿಂದ ಪೊಲೀಸರ ಕೈಗೆ ಸಿಗದೇ ತಲೆ ಮರೆಸಿಕೊಂಡಿದ್ದ. ನಿನ್ನೆ ತಡರಾತ್ರಿ 12:55 ಸುಮಾರಿಗೆ ಆರೋಪಿ ಅನಿಲ್ ಕಾಟನ್ ಪೇಟೆಯ ವೆಟರ್ನರಿ ಹಾಸ್ಪಿಟಲ್ ಬಳಿ ಇರುವ ಮಾಹಿತಿ ಪಡೆದ ಪೊಲೀಸರು, ಆತನನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಅನಿಲ್ ಪೊಲೀಸರಿಗೆ ಶರಣಾಗದೆ ಚಾಮರಾಜಪೇಟೆ ಪೊಲೀಸ್ ಪೇದೆ ಚಂದ್ರಶೇಖರ್ ಪಾಟೀಲ್ ರ ಎಡಗೈಗೆ ಚಾಕುವಿನಿಂದ ಹಲ್ಲೆ ಮಾಡಿದ್ದ.
ಈ ವೇಳೆ ಆತ್ಮರಕ್ಷಣೆಗಾಗಿ ಚಾಮರಾಜಪೇಟೆ ಇನ್ಸ್ಪೆಕ್ಟರ್ ಕುಮಾರಸ್ವಾಮಿ ಅವರು ಆರೋಪಿ ಎಡಗಾಲಿಗೆ ಫೈರಿಂಗ್ ಮಾಡಿದ್ದಾರೆ. ಇನ್ನು ಪೊಲೀಸ್ ಪೇದೆ ಚಂದ್ರಶೇಖರ್ ಪಾಟೀಲ್ ಹಾಗೂ ಆರೋಪಿ ಅನಿಲ್ ಇಬ್ಬರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಅನಿಲ್, ದರೋಡೆ, ಕೊಲೆ ಯತ್ನ, ಸುಲಿಗೆ ಹೀಗೆ ನಾನಾ ಪ್ರಕರಣಗಳಲ್ಲಿ ಭಾಗಿಯಾಗಿದ್ದು,ಪೊಲೀಸರು ತನಿಖೆ ಮುಂದುವರೆಸಿದ್ದಾರೆ.