ಬೆಂಗಳೂರು : ಕಳೆದ ಎರಡು ವರ್ಷಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗುತ್ತಿದ್ದ ನಟೋರಿಯಸ್ ರೌಡಿ ಮೇಲೆ ಬೆಳಗಿನ ಜಾವ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ನಟೋರಿಯಸ್ ರೌಡಿ ಅನೀಸ್ ಅಹ್ಮದ್ (32) ಶೂಟೌಟ್ ಒಳಗಾದ ಆರೋಪಿಯಾಗಿದ್ದಾನೆ.
ಈತ ಪೂರ್ವ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ, ಕೊಲೆ ಯತ್ನ, ರಾಬರಿ, ಮಾನಭಂಗ , ಡಕಾಯಿತಿ ಸೇರಿದಂತೆ 15ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರಿಗೆ ಬೇಕಾಗಿದ್ದವ. ಅನೀಸ್ ಅಹ್ಮದ್ ಇಂದು ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯ ಅರೇಬಿಕಾ ಕಾಲೇಜ್ ಬಳಿ ಇರುವ ಮಾಹಿತಿ ಮೇರೆಗೆ, ಬೆಳಗಿನ ಜಾವ ಕೆ.ಜಿ ಹಳ್ಳಿ ಇನ್ಸ್‌ಪೆಕ್ಟರ್ ಅಜಯ್ ಸಾರಥಿ ಬಂಧಿಸಲು ತೆರಳಿದಾಗ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.
ಈ ಘಟನೆ ವೇಳೆ, ಇಬ್ಬರು ಪೊಲಿಸರು ಗಾಯಗೊಂಡಿದ್ದು , ತಕ್ಷಣ ಎಚ್ಚೆತ್ತ ಇನ್ಸ್‌ಪೆಕ್ಟರ್ ಆತ್ಮ ರಕ್ಷಣೆಗೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ನಂತರ ಮತ್ತೆ ಆರೋಪಿ ಇನ್ಸ್‌ಪೆಕ್ಟರ್ ಮೇಲೆ ಹಲ್ಲೆ ಮಾಡಲು ಮುಂದಾದ ಕಾರಣ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಸದ್ಯ ಗಾಯಗೊಂಡ ಕೆ.ಜಿ ಹಳ್ಳಿ ಸಿಬ್ಬಂದಿಯನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೆಯೇ ಆರೋಪಿಯನ್ನು ಕೂಡಾ ಆಸ್ಪತ್ರೆಗೆ ದಾಖಲಿಸಿದ್ದು, ಕೊರೊನಾ ಟೆಸ್ಟ್ ಬಳಿಕ ಮತ್ತೆ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯಲಿದ್ದಾರೆ.