ಬೆಂಗಳೂರು: ನಗರದ ವಿವಿಧ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ರಾಜಗೋಪಾಲ ನಗರದ ರೌಡಿಶೀಟರ್ ಕಾಲಿಗೆ ನಂದಿನಿ ಲೇಔಟ್ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಲಗ್ಗೆರೆ ಬಳಿ ರೌಡಿಶೀಟರ್ ಕಿರಣ್ ಅಲಿಯಾಸ್ ಚಡ್ಡಿ ಕಿರಣ್ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಈತನ ಸಹಚರನನ್ನು ಸಹ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಲಗ್ಗೆರೆ ಬಳಿ ರೌಡಿಶೀಟರ್ ಕಿರಣ ಅಲಿಯಾಸ್ ಚಡ್ಡಿ ಕಿರಣ್ ಗೆ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದೇ ವೇಳೆ ಬಂಧಿಸಲಾಗಿರುವ ಮತ್ತೋರ್ವ ಆರೋಪಿ ದಾಸ ಪೊಲೀಸ್ ಸುಪರ್ದಿಯಲ್ಲಿದ್ದಾನೆ.
ಮಾ.2 ರಂದು ವ್ಯಕ್ತಿವೋರ್ವನಿಗೆ ಚಾಕುವಿನಿಂದ ಇರಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಕಿರಣ್, ಬಳಿಕ ಪರಾರಿಯಾಗಿದ್ದ. ಈತನ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಲಗ್ಗೆರೆ ಬಳಿ ರೌಡಿಶೀಟರ್ ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಂದಿನಿ ಲೇಔಟ್ ಪೊಲೀಸ್ ಠಾಣೆಯ ಪಿಎಸ್ಐ ನವೀದ್ ನೇತೃತ್ವದ ತಂಡ ಸ್ಥಳಕ್ಕೆ ತೆರಳಿದೆ. ಬಂಧಿಸಲು ಹೋದ ಸಿಬ್ಬಂದಿಯ ಮೇಲೆ ಕಿರಣ್ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಪೊಲೀಸ್ ಕಾನ್ಸ್ಟೇಬಲ್ ಬಸವಣ್ಣ ಎಂಬುವವರು ಗಾಯಗೊಂಡಿದ್ದಾರೆ. ಆದ ಕಾರಣ ಆತ್ಮರಕ್ಷಣೆಗಾಗಿ ಪಿಎಸ್ಐ ನವೀದ್ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಗಾಯಗೊಂಡಿದ್ದ ಕಿರಣ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣದ ಸಂಬಂಧ ಪೊಲೀಸರು ಕಿರಣ್ ಹಾಗೂ ದಾಸ ಇಬ್ಬರನ್ನೂ ಬಂಧಿಸಿದ್ದಾರೆ ಎಂದು ನಗರ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
ಇದನ್ನೂ ಓದಿ: ಮುತ್ತೂಟ್ ಗ್ರೂಪ್ ಅಧ್ಯಕ್ಷನ ಡೆತ್ ಕೇಸ್ .. ತನಿಖೆ ಚುರುಕುಗೊಳಿಸಿದ ಪೊಲೀಸರು
ಈತನ ವಿರುದ್ಧ ರಾಜಗೋಪಾಲ ನಗರ, ನಂದಿನಿ ಲೇಔಟ್, ಕಾಮಾಕ್ಷಿಪಾಳ್ಯ, ನಂದಿಗಿರಿಧಾಮ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಸುಲಿಗೆ, ದರೋಡೆ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗಷ್ಟೇ ಆರೋಪಿ ಜೈಲಿನಿಂದ ಹೊರಬಂದಿದ್ದ ಕಿರಣ್ ಮತ್ತೆ ತನ್ನ ಚಾಳಿಯನ್ನ ಮುಂದುವರಿಸಿದ್ದ. 2019 ರಲ್ಲಿ ಪೊಲೀಸರ ಮೇಲೆಯೇ ಆರೋಪಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ತಪ್ಪಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.