ಆನೇಕಲ್: ತಡರಾತ್ರಿ ಮೊಬೈಲ್ನಲ್ಲಿ ಮಾತನಾಡುತ್ತ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಏಕಾಏಕಿ ಸಿಂಗಲ್ ಬ್ಯಾರೆಲ್ ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಗಡಿ ಅಂಚಿನಲ್ಲಿ ನಡೆದಿದೆ.
ಕೊಲೆಗೀಡಾದ ವ್ಯಕ್ತಿ ರಮೇಶ್ ಎಂದು ತಿಳಿದುಬಂದಿದೆ. ಆನೇಕಲ್ ಉಪವಿಭಾಗದ ಜಿಗಣಿ ಪೊಲೀಸ್ ಠಾಣಾ ಪರಿಧಿಯಲ್ಲಿ ಶೂಟೌಟ್ ನಡೆದಿದ್ದು, ರಮೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮುನಿಯಪ್ಪನೊಂದಿಗೆ ಮೃತ ರಮೇಶ್ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ರಮೇಶ್ ಜಿಗಣಿ ಪೊಲೀಸ್ ಠಾಣಾ ಮೆಟ್ಟಿಲೇರಿದ್ದರು. ಇದೀಗ ಅನೈತಿಕ ಸಂಬಂಧವಿರಿಸಿಕೊಂಡಿದ್ದ ಮುನಿಯಪ್ಪ ಗುಂಡು ಹಾರಿಸಿದ ಆರೋಪಿಯಾಗಿದ್ದಾನೆ.
ವ್ಯಾಜ್ಯ ಮಾತುಕತೆಯಲ್ಲಿಯೇ ಮುಂದುವರೆದಿದ್ದು, ಅಕ್ರಮ ಸಂಬಂಧಕ್ಕೆ ಎರಡು ವರ್ಷ ತುಂಬಿತ್ತು ಎಂದು ಗ್ರಾಮದಲ್ಲಿನ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಈ ಕುರಿತಂತೆ ರಮೇಶ್-ಮುನಿಯಪ್ಪನ ನಡುವೆ ದ್ವೇಷ ಮಡುಗಟ್ಟಿತ್ತು. ಇದೇ ವಿಷಯವಾಗಿ ರಾತ್ರಿ ರಮೇಶ್ ಮೊಬೈಲ್ನಲ್ಲಿ ಮಾತನಾಡುತ್ತ ಮುನಿಯಪ್ಪನ ಅಣತಿ ದೂರದಲ್ಲಿ ನಡೆದು ಹೋಗುತ್ತಿರುವ ಸಂದರ್ಭದಲ್ಲಿ, ಮುನಿಯಪ್ಪನ ತಂದೆಯ ಹೆಸರಿನಲ್ಲಿದ್ದ ಪರವಾನಗಿ ಸಿಂಗಲ್ ಬ್ಯಾರಲ್ ಬಂದೂಕಿನಿಂದ ರಮೇಶನ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ತಡರಾತ್ರಿಯೇ ಗುಂಡಿನ ಶಬ್ಧಕ್ಕೆ ಬೆದರಿದ ಗ್ರಾಮದ ಜನತೆ ಆಚೆ ಬಂದು ಗಮನಿಸಿದಾಗ ಮುನಿಯಪ್ಪನ ಬಳಿ ಬಂದೂಕು ಹಾಗೂ ರಸ್ತೆಯಲ್ಲಿ ರಮೇಶ ರಕ್ತದ ಮಡುವಿನಲ್ಲಿ ಮೃತಪಟ್ಟಿರುವುದು ಕಂಡು ಬಂದಿದೆ ಎಂದು ಜನ ಮಾಹಿತಿ ನೀಡಿದ್ದಾರೆ. ಇಡೀ ಗ್ರಾಮದಲ್ಲಿ ದ್ವೇಷದ ಮೂಲ ಗೊತ್ತಿದ್ದರಿಂದ ಜಿಗಣಿ ಪೊಲೀಸರಿಗೆ ಮಾಹಿತಿ ಮುಟ್ಟಿದೆ. ಮಾಹಿತಿ ಆಧರಿಸಿ ಸ್ಥಳಕ್ಕಾಗಮಿಸಿ ಆರೋಪಿ ಮುನಿಯಪ್ಪನನ್ನು ಬಂದೂಕಿನ ಸಮೇತ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.