ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ಜಲ ಮಂಡಳಿ ಶಾಕ್ ನೀಡಲು ಮುಂದಾಗಿದೆ. ಇನ್ಮುಂದೆ ಕಾವೇರಿ ನೀರು ಅಷ್ಟು ಸುಲಭವಾಗಿ ಸಿಗೋದಿಲ್ಲ. ಯಾಕೆಂದರೆ, ನಗರದಲ್ಲಿ ನೀರಿನ ದರ ಮತ್ತೆ ಹೆಚ್ಚಲಿದೆ.
ಕಾವೇರಿ ನೀರಿನ ದರ ಪರಿಷ್ಕರಣೆಗೆ ಜಲ ಮಂಡಳಿ ಮುಂದಾಗಿದೆ. ಶೇ.30ರಷ್ಟು ದರ ಹೆಚ್ಚಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಹಿಂದೆ 2014 ರಲ್ಲಿ ನೀರಿನ ದರ ಏರಿಕೆ ಮಾಡಲಾಗಿತ್ತು. ಇದೀಗ 6 ವರ್ಷದ ಬಳಿಕ ಮತ್ತೆ ದರ ಪರಿಷ್ಕರಣೆಗೆ ಬಿಡಬ್ಲ್ಯುಎಸ್‌ಎಸ್‌ಬಿ ತಯಾರಿ ನಡೆಸಿದೆ.
ವಿದ್ಯುತ್ ದರ ಏರಿಕೆಯಿಂದ ಜಲ ಮಂಡಳಿಗೆ ಭಾರಿ ಹೊಡೆತ ಬೀಳ್ತಿದೆ. ಈ ಹಿನ್ನೆಲೆ ನೀರಿನ ದರವನ್ನು ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದೆ. ಸರ್ಕಾರದಿಂದ ಒಪ್ಪಿಗೆ ಬಂದ ಕೂಡಲೇ ಪರಿಷ್ಕೃತ ದರ ಜಾರಿಯಾಗಲಿದೆ ಎಂದು ಜಲ ಮಂಡಳಿ ತಿಳಿಸಿದೆ.
ಈಗಾಗಲೇ ವಿದ್ಯುತ್ ದರ ಏರಿಕೆಯಿಂದ ಕಂಗಾಲಾಗಿರುವ ಉದ್ಯಾನ ನಗರಿ ಜನರಿಗೆ ಈಗ ನೀರಿನ ದರ ಏರಿಕೆ ಮತ್ತೊಂದು ಶಾಕ್ ನೀಡಲಿದೆ.