ಬೆಂಗಳೂರು : ಸದಾ ಗಿಜಿಗುಡುವ ಜನದಟ್ಟಣೆ, ಅಡ್ಡಾದಿಡ್ಡಿ ವಾಹನಗಳ ಓಡಾಟ, ಬೀದಿ ವ್ಯಾಪಾರಿಗಳಿಂದ ರಸ್ತೆ ಅತಿಕ್ರಮಣ, ಮಳೆ ಬಂದಾಗ ಕೆರೆಯಂತಾಗುವ ರಸೆಲ್ ಮಾರುಕಟ್ಟೆ ಆವರಣ, ಮಾರುಕಟ್ಟೆಗಳಿಂದ ಹೊರಹೊಮ್ಮುವ ವಾಸನೆ, ಸದ್ಯ ಕಾಮಗಾರಿಗಳಿಗಾಗಿ ಅಗೆದಿರುವ ರಸ್ತೆ, ತೆರೆದ ಚರಂಡಿಗಳು.. ಶಿವಾಜಿನಗರ ಅಂದರೆ ಈವರೆಗೆ ನೆನಪಾಗುತ್ತಿದ್ದ ಈ ಚಿತ್ರಣಗಳು ಮೂರು ತಿಂಗಳಲ್ಲಿ ಸಂಪೂರ್ಣ ಬದಲಾಗಲಿವೆ, ಎಲ್ಲವೂ ಸ್ಮಾರ್ಟ್ ಆಗಲಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಅಂದಾಜು 11 ಕೋಟಿ ರೂ. ವೆಚ್ಚದಲ್ಲಿ ಶಿವಾಜಿನಗರ ವಾರ್ಡ್ 91ರ ರಸ್ತೆಗಳು, ರಸೆಲ್ ಮಾರುಕಟ್ಟೆ ಆವರಣ, ಶಿವಾಜಿನಗರ ಚರ್ಚ್ ಮುಂಭಾಗ, ಚಾಂದಿನಿಚೌಕ್, ಎಮ್ ಕೆ ಸ್ಟ್ರೀಟ್, ಸೇಂಟ್ ಜಾನ್ಸ್ ರೋಡ್ ಹಾಗೂ ರೆಸೆಲ್ ಮಾರುಕಟ್ಟೆ ಮುಂಭಾಗ ಪ್ಲಾಝಾ ಮಾದರಿಯಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಯಾಗಲಿದೆ.
ರಾಜ್ಯದಲ್ಲೇ ಪ್ರಥಮ ಟ್ರಾನ್ಸ್ ಜೆಂಡರ್ ಟಾಯ್ಲೆಟ್ : ರೆಸೆಲ್ ಮಾರುಕಟ್ಟೆ ಮುಂಭಾಗದಲ್ಲಿ ಪ್ಲಾಝಾ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಅಲ್ಲಿನ ಮರಗಳನ್ನು ಕಡಿಯದೇ ಹಾಗೆಯೇ ಉಳಿಸಿಕೊಳ್ಳಲಾಗುತ್ತದೆ. ಜೊತೆಗೆ ಹೊಸ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತದೆ. ಈ ಪೈಕಿ, ಮಹಿಳೆಯರು, ಪುರುಷರು, ವಿಶೇಷ ಚೇತನರ ಪ್ರತ್ಯೇಕ ಶೌಚಾಲಯ ಇರುವುದರೊಂದಿಗೆ ಮಂಗಳಮುಖಿಯರಿಗೂ ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡುವುದರೊಂದಿಗೆ ಅವರಿಗೂ ಆದ್ಯತೆ ನೀಡಲಾಗುತ್ತಿದೆ. ಅಲ್ಲದೆ ಮುಜುಗರ ತಪ್ಪಿಸಿ, ಸಮಾನ ಮೂಲಸೌಕರ್ಯದ ಅವಕಾಶ ಕಲ್ಪಿಸಿದಂತೆ ಆಗುತ್ತಿದೆ.
ಶತಮಾನದಷ್ಟು ಹಳೆಯ ಚರಂಡಿ ವ್ಯವಸ್ಥೆ ಬದಲಾವಣೆ : ಶಿವಾಜಿನಗರದ ರೆಸೆಲ್ ಮಾರುಕಟ್ಟೆ 1927ರಲ್ಲಿ ನಿರ್ಮಾಣವಾಗಿದೆ. ಬ್ರಿಟಿಷ್ ಕಾಲದಲ್ಲಿ ಕಲ್ಲಿನಿಂದ ನಿರ್ಮಾಣ ಆಗಿದ್ದ ಒಳಚರಂಡಿ, ನೀರಿನ ಸಂಪರ್ಕಗಳು ಸಂಪೂರ್ಣವಾಗಿ ಮುಚ್ಚಿಹೋಗಿದ್ದ ಸ್ಥಿತಿಯಲ್ಲಿದ್ದವು. ಇದರಿಂದಲೇ ಪ್ರತೀ ಮಳೆಗಾಲದಲ್ಲಿ ನೀರು ನಿಂತು ರಸ್ತೆಗಳೆಲ್ಲ ನದಿಯಂತಾಗುತ್ತಿದ್ದವು. ಇದೀಗ ಹೂಳನ್ನು ಸಂಪೂರ್ಣವಾಗಿ ತೆರವು ಮಾಡಲಾಗುತ್ತಿದ್ದು, ಅತ್ಯಾಧುನಿಕ ಪೈಪ್‌ಗಳನ್ನು ಅಳವಡಿಸಿ ಚರಂಡಿ ವ್ಯವಸ್ಥೆಯನ್ನು ನೀರಿನ ಪೂರೈಕೆ, ಕೇಬಲ್‌ಗಳ ಅಳವಡಿಕೆಯನ್ನು ಮಾಡಲಾಗುತ್ತದೆ. ಸದ್ಯ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಗಳು ಬಂದ್ ಆಗಿದ್ದು, ಒನ್ ವೇ ಮಾತ್ರ ಅವಕಾಶ ಕೊಡಲಾಗಿದೆ.
ಶತಮಾನದಷ್ಟು ಹಳೆಯ ಬಾವಿ, ರಸ್ತೆ ದೀಪಕ್ಕೆ ಮೆರುಗು : ರಸೆಲ್ ಮಾರುಕಟ್ಟೆ ಪಕ್ಕದಲ್ಲೇ ಶತಮಾನದಷ್ಟು ಹಳೆಯ ಬಾವಿಯೊಂದಿದ್ದು, ಈಗಲೂ ಇದರಲ್ಲಿ ನೀರಿದೆ. ಹೀಗಾಗಿ, ಈ ನೀರನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಜಲಚರಗಳನ್ನು ಬಿಟ್ಟು, ಬಣ್ಣಬಣ್ಣದ ಸ್ಟೋನ್‌ಗಳನ್ನು ಅಳವಡಿಸಿ, ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಲಾಗುವುದು. ಇನ್ನು, ರೆಸೆಲ್ ಮಾರುಕಟ್ಟೆ ಬಲಬದಿಗೆ ಹಳೆಕಾಲದ ದಾರಿದೀಪವೊಂದಿದ್ದು, ಇದನ್ನು ಇನ್ನಷ್ಟು ಮೆರುಗುಗೊಳಿಸಿ ಸುತ್ತಲೂ ಯೂರೋಪ್ ಮಾದರಿಯ ಬಣ್ಣದ ಗ್ರಾನೈಟ್‌ಗಳಿಂದ ಡಿಸೈನ್ ಮಾಡಲಾಗುತ್ತದೆ.
ಹೊಸ ಪ್ಲಾಝಾ ನಿರ್ಮಾಣ-ಗಡಿಯಾರ ಗೋಪುರ ನಿರ್ಮಾಣ : ರೆಸೆಲ್ ಮಾರುಕಟ್ಟೆ ಮುಂಭಾಗ ಹಾಗೂ ಶಿವಾಜಿನಗರ ಚರ್ಚ್ ಭಾಗದ ಸಾಲುಸಾಲು ಅಂಗಡಿಗಳ ಮಧ್ಯ ಇರುವ ಖಾಲಿ ಜಾಗದಲ್ಲಿ ಕಾಬೋಲ್ ಸ್ಟೋನ್‌ಗಳನ್ನು ಹಾಕಿ ಪ್ಲಾಜಾ ನಿರ್ಮಾಣ ಆಗಲಿದೆ. ಶಿವಾಜಿನಗರ ಚರ್ಚ್ ಮುಂಭಾಗದ ಭಾಗದಲ್ಲಿ ನೀರಿನ ಕಾರಂಜಿ ನಿರ್ಮಾಣ ಆಗಲಿದೆ. ಮಕ್ಕಳಿಗೆ ಆಟವಾಡಲು, ಹಿರಿಯ ನಾಗರಿಕರಿಗೆ ಕುಳಿತು ವಿಶ್ರಾಂತಿ ಮಾಡಲು ಉತ್ತಮ ಸ್ಥಳವಾಗಲಿದೆ.
ಪ್ಲಾಜಾದ ಇನ್ನೊಂದು ಭಾಗದಲ್ಲಿ ಬೀಫ್ ಮಾರ್ಕೆಟ್ ಬದಿಯಲ್ಲಿ 20-25 ಅಡಿ ಎತ್ತರದ ನಾಲ್ಕು ಗಡಿಯಾಗರಳಿರುವ ಗೋಪುರ ಇದ್ದು, ಇದರಲ್ಲೇ ಮಾರುಕಟ್ಟೆಯನ್ನು ಎತ್ತರದಿಂದ ವೀಕ್ಷಿಸಲು ಪೊಲೀಸ್ ಚೌಕಿ ಇರಲಿದೆ. ಇನ್ನು, ಆ ಭಾಗದಲ್ಲಿರುವ ಮರಗಳ ಬುಡದಲ್ಲಿ ದೀಪಗಳಿಂದ ಅಲಂಕರಿಸಿ, ತಿನಿಸುಗಳ ಅಂಗಡಿಗಳು (ಈಟರೀಸ್), ಜನರಿಗೆ ಕುಳಿತು ವಿರಮಿಸಲು ಈ ಪ್ಲಾಝಾದಲ್ಲಿ ಅವಕಾಶ ಇರಲಿದೆ. ಇನ್ನು, ಇದೇ ಯೋಜನೆಯಡಿ ಪಾರ್ಕಿಂಗ್ ವ್ಯವಸ್ಥೆ ಕೂಡ ಆಗಿಲಿದೆ. 80 ಕಾರುಗಳ ಪಾರ್ಕಿಂಗ್ ಹಾಗೂ 300 ದ್ವಿಚಕ್ರ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ಇರಲಿದೆ.
ಬೀದಿ ವ್ಯಾಪಾರಿಗಳಿಗೆ ಪ್ರತ್ಯೇಕ ಜಾಗ : ಸದ್ಯ ನೂರಾರು ಬೀದಿ ವ್ಯಾಪಾರಿಗಳು ಈ ಜಾಗದಲ್ಲಿ ವ್ಯಾಪಾರದಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಇವರಿಗೇ ಪ್ರತ್ಯೇಕ ಕಟ್ಟಡ ನಿರ್ಮಿಸುವ ಯೋಜನೆಯಿದೆ. ಒಂದು ಮಹಡಿಯಲ್ಲಿ ಕಡಿಮೆ ಬಾಡಿಗೆಗೆ ಅವಕಾಶ ಕೊಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕಾರ್ಮಿಕರಿಗೆ ಅದಮ್ಯ ಚೇತನದಿಂದ ಊಟ ವ್ಯವಸ್ಥೆ : ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಾದ್ಯಂತ 600ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಮಧ್ಯಾಹ್ನದ ಊಟವನ್ನು ಅದಮ್ಯ ಚೇತನ ಸಂಸ್ಥೆ ವತಿಯಿಂದ ಊಟ ಹಂಚಲಾಗುತ್ತಿದೆ. ಸಂಪೂರ್ಣ ಕಾಮಗಾರಿಗಳನ್ನು 90 ದಿನಗಳಲ್ಲಿ ಮುಗಿಸಲು ಗಡುವು ನೀಡಲಾಗಿದೆ ಎಂದು ಬೆಂಗಳೂರು ಸ್ಮಾರ್ಟ್ ಸಿಟಿ ಟೀಂ ಲೀಡರ್ ರಾಜಾ ಅವರು ಮಾಹಿತಿ ನೀಡಿದರು.
ಶಿವಾಜಿನಗರ ಬಸ್ ನಿಲ್ದಾಣ ಅಭಿವೃದ್ಧಿ : ಶಿವಾಜಿನಗರ ಬಸ್ ನಿಲ್ದಾಣ ಹಾಗೂ ಪಾದಾಚಾರಿ ರಸ್ತೆಗಳ ನವೀಕರಣವೂ ಎರಡನೇ ಹಂತದಲ್ಲಿ ಆಗಲಿದೆ. ಸಾರ್ವಜನಿಕ ಶೌಚಾಲಯ, ಮಗುವಿನ ಆರೈಕೆ, ಬಸ್ ಕಾಯುವ ನಿಲ್ದಾಣ, ಪಾದಾಚಾರಿಗಳ ಸುರಕ್ಷತೆ, ಸುರಂಗ ಮಾರ್ಗಗಳ ನವೀಕರಣ ಆಗಲಿದೆ.
ಈ ಸುರಂಗ ಮಾರ್ಗ ಹೊಸದಾಗಿ ನಿರ್ಮಾಣ ಆಗುತ್ತಿರುವ ಮೆಟ್ರೋ ನಿಲ್ದಾಣದ ಜೊತೆಗೂ, ರಸೆಲ್ ಮಾರುಕಟ್ಟೆಯನ್ನೂ ಸಂಪರ್ಕಿಸಲಿದೆ. ಅಲ್ಲದೆ ಇಡೀ ಬೆಂಗಳೂರಿನ ಸ್ಮಾರ್ಟ್ ಸಿಟಿ ಯೋಜನೆಯ ರಸ್ತೆಕಾಮಗಾರಿಗಳು ಒಂದೆರಡು ತಿಂಗಳಲ್ಲಿ ಸಂಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ತಿಳಿಸಿದರು.
ಸದ್ಯ ರಸ್ತೆ ಕಾಮಗಾರಿಗಳು, ಧೂಳಿಂದ ಕಂಗೆಟ್ಟಿರುವ ಜನಸಾಮಾನ್ಯರು, ಕಾಮಗಾರಿ ಆದಷ್ಟು ಬೇಗ ಮುಗಿಯಬೇಕು. ಲಾಕ್‌ಡೌನ್‌ನಿಂದ ಈಗಾಗಲೇ ನಷ್ಟವಾಗಿದ್ದು, ಈಗ ಕಾಮಗಾರಿಗಳಿಂದ ವ್ಯಾಪಾರ, ವಹಿವಾಟಿಗೆ ಅಡ್ಡಿಯಾಗಿದೆ ಎಂದರು.