ಬೆಂಗಳೂರು: ಉಪಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಶಿವಾಜಿನಗರ ರಣಕಣ ರಂಗೇರುತ್ತಿದೆ. ಅಲ್ಲದೆ ಕಳೆದ ಏಳು ಚುನಾವಣೆಗಳಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಮಾಜಿ ಸಚಿವ ರೋಷನ್ ಬೇಗ್ ಶಿವಾಜಿನಗರ ಉಪಚುನಾವಣೆಯಿಂದ ದೂರ ಉಳಿದಿದ್ದು, ರೋಷನ್ ಬೇಗ್ ಅವರ ಗೈರು ಯಾವ ಪಕ್ಷಕ್ಕೆ ಪ್ಲಸ್ ಆಗುತ್ತೆ, ಯಾವ ಪಕ್ಷಕ್ಕೆ ಮೈನಸ್ ಆಗುತ್ತದೆ ಎಂಬ ಲೆಕ್ಕಾಚಾರ ಶುರುವಾಗಿದೆ.
ಐಎಂಎ ಹಗರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಅವರ ಹೆಸರು ಕೇಳಿ ಬಂದ ಹಿನ್ನೆಲೆ ಬಿಜೆಪಿ ರೋಷನ್ ಬೇಗ್ ಅವರಿಗೆ ಟಿಕೆಟ್ ನೀಡದೆ ಹೊಸಮುಖವನ್ನು ಶಿವಾಜಿನಗರಕ್ಕೆ ಆಯ್ಕೆ ಮಾಡಿತು. ಆದರೆ ರೋಷನ್ ಬೇಗ್ ಅಭಿಮಾನಿಗಳು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಬೇಗ್ ಮೇಲೆ ಒತ್ತಡ ಹಾಕಿದರು. ಆದರೆ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಮಾಧಾನ ಮಾಡಿ ಮತ್ತೆ ಬಿಜೆಪಿ ಜೊತೆ ಗುರುತಿಸಿಕೊಂಡ ರೋಷನ್ ಬೇಗ್ ಕೊನೆಗೂ ಚುನಾವಣಾ ಕಣದಿಂದ ದೂರ ಉಳಿದರು.
ಇದಲ್ಲದೇ ಬಿಜೆಪಿ ರೋಷನ್ ಬೇಗ್ ಅವರಿಗೆ ಬಿ ಫಾರಂ ಕೊಟ್ಟು ನಿಲ್ಲಿಸದೆ. ಸ್ವತಂತ್ರವಾಗಿಯಾದ್ರು ನಿಲ್ಲಿಸಿ ಅಲ್ಪಸಂಖ್ಯಾತರ ಮತಗಳನ್ನು ಚದುರಿಸುವ ಕೆಲಸ ಮಾಡಿದ್ರೆ ಅದು ಬಿಜೆಪಿಗೆ ಪ್ಲಸ್ ಆಗ್ತಿತ್ತು. ಆದರೆ ಈಗ ಕಾಂಗ್ರೆಸ್ನಿಂದ ರಿಜ್ವಾನ್ ಅರ್ಷದ್ ಸ್ಪರ್ಧಿಸಿರೋದ್ರಿಂದ ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್ ಪಾಲಾಗೋದ್ರಲ್ಲಿ ಡೌಟ್ ಇಲ್ಲ. ಯಾಕಂದ್ರೆ ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ರಿಜ್ವಾನ್ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋತಿದ್ರು ಸಹ ಶಿವಾಜಿನಗರದಲ್ಲಿ ಒಳ್ಳೆ ಲೀಡ್ ಸಿಗುತ್ತಿತ್ತು. ರಿಜ್ವಾನ್ಗೆ ಇಲ್ಲಿಯ ಮತದಾರರ ಆಶೀರ್ವಾದ ಖಂಡಿತಾ ಇದೆ ಅನ್ನೋದು ರಾಜಕೀಯ ವಲಯದಲ್ಲಿ ಕೇಳಿ ಬರ್ತಿರುವ ಮಾತು.
ಲೋಕಲ್ ಪಾಲಿಟಿಕ್ಸ್ ನಾಡಿ ಮಿಡಿತ ಅರಿಯದ ಜೆಡಿಎಸ್ ಅಭ್ಯರ್ಥಿ ತನ್ವೀರ್ ಯಾವ ರೀತಿ ಮತದಾರ ಪ್ರಭುಗಳ ಸೆಳೆಯುತ್ತಾರೆ ಗೊತ್ತಿಲ್ಲ. ಅಲ್ಲದೆ ಇದುವರೆಗೂ ಜೆಡಿಎಸ್ನ ಯಾವ ಹಿರಿಯ ನಾಯಕರು ಸಹ ಶಿವಾಜಿನಗರದಲ್ಲಿ ಪ್ರಚಾರಕ್ಕೆ ಬಾರದಿರುವುದು.ಎಲ್ಲೋ ಒಂದು ಕಡೆ ದೊಡ್ಡಗೌಡ್ರು ಶಿವಾಜಿನಗರವನ್ನು ಅಷ್ಟಾಗಿ ಗಮನಿಸಿದಂತೆ ಕಾಣ್ತಿಲ್ಲ. ಅಲ್ಲದೆ ಬಿಜೆಪಿ ಕಾಂಗ್ರೆಸ್ ಜಿದ್ದಿಗೆ ಬಿದ್ದವರಂತೆ ಮತ ಪ್ರಚಾರ ಮಾಡ್ತಿದ್ದಾರೆ. ಶರವಣ ಪರ ಸಿಎಂ ಅಖಾಡಕ್ಕಿಳಿದು ನೂರಕ್ಕೆ ನೂರರಷ್ಟು ನಾವು 25 ರಿಂದ 30 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ ಎಂಬ ಭರವಸೆಯನ್ನು ಹೊಂದಿದ್ದಾರೆ.
ಇನ್ನೂ ಕೈ ಅಭ್ಯರ್ಥಿ ರಿಜ್ವಾನ್ ಪರ ಕಾಂಗ್ರೆಸ್ ಟ್ರಬಲ್ ಶೂಟರ್ ಅಖಾಡಕ್ಕೆ ಇಳಿದಿರೋದು ರಿಜ್ವಾನ್ಗೆ ಆನೆ ಬಲ ಬಂದಿದ್ದು, ಖಂಡಿತಾ ಶಿವಾಜಿನಗರದ ಮತದಾರರು ಈ ಬಾರಿ ನನಗೆ ಆಶೀರ್ವಾದ ಮಾಡೇ ಮಾಡ್ತಾರೆ ಎಂಬ ನಂಬಿಕೆಯಲ್ಲಿದ್ದಾರೆ.
ಒಟ್ಟಿನಲ್ಲಿ ಶಿವಾಜಿನಗರ ಕ್ಷೇತ್ರ ಮೇಲ್ನೋಟಕ್ಕೆ ಕಾಂಗ್ರೆಸ್ ಬಿಜೆಪಿ ನಡುವೆ ನೇರ ಸ್ಪರ್ಧೆ ಇದ್ದು, ಒಂದು ವೇಳೆ ಜೆಡಿಎಸ್ ಅಭ್ಯರ್ಥಿ ಅಲ್ಪಸಂಖ್ಯಾತರ ಮತಗಳನ್ನು ಗಿಟ್ಟಿಸುವಲ್ಲಿ ಸಕ್ಸಸ್ ಆಗಿ, ಅದು ರಿಜ್ವಾನ್ ಅರ್ಷದ್ಗೆ ಮೈನಸ್ ಆದ್ರೆ, ಬಿಜೆಪಿಗೆ ಪ್ಲಸ್ ಆಗಲಿದೆ.