ಬೆಂಗಳೂರು: ಶಿಕಾರಿಪುರ ಕಾಂಗ್ರೆಸ್ ಟಿಕೆಟ್ ಫೈಟ್ ಇಂದು ಮುಂದುವರಿದಿದ್ದು, ಸಿದ್ದರಾಮಯ್ಯ ನಿವಾಸ ಮುಂಭಾಗ ಗೋಣಿ ಮಾಲತೇಶ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಶಿಕಾರಿಪುರದಿಂದ ಈ ಸಾರಿ ವಿಧಾನಸಭೆ ಚುನಾವಣೆಯಲ್ಲಿ ಬಿ.ವೈ. ವಿಜಯೇಂದ್ರ ವಿರುದ್ಧ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತದೆ ಎಂದು ಆರೋಪಿಸಿ ನಿನ್ನೆ ಶಿವಮೊಗ್ಗ ಕಾಂಗ್ರೆಸ್ ನಾಯಕ ಹಾಗೂ ಶಿಕಾರಿಪುರ ಟಿಕೆಟ್ ಆಕಾಂಕ್ಷಿ ನಾಗರಾಜ್ ಗೌಡ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಇಂದು ಸಿದ್ದರಾಮಯ್ಯ ನಿವಾಸದ ಮುಂದೆ ಜಮಾಯಿಸಿದ ಗೋಣಿ ಮಾಲತೇಶ್ ಬೆಂಬಲಿಗರು ಹೈಡ್ರಾಮಾ ನಡೆಸಿದ್ದಾರೆ.
ನಿನ್ನೆ ಸಿದ್ದರಾಮಯ್ಯ ನಿವಾಸದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿ ನಾಗರಾಜ್ ಗೌಡ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ವಿಜಯೇಂದ್ರ ಗೆಲ್ಲಿಸುವುದಕ್ಕೆ ಕಾಂಗ್ರೆಸ್ ಸರಿಯಾದ ಅಭ್ಯರ್ಥಿಯನ್ನು ನಿಲ್ಲಿಸುತ್ತಿಲ್ಲ ಎಂದು ಸಿದ್ದರಾಮಯ್ಯ ನಿವಾಸದಲ್ಲಿ ಗದ್ದಲ ಎಬ್ಬಿಸಿದ ಶಿಕಾರಿಪುರ ಕಾಂಗ್ರೆಸ್ ಕಾರ್ಯಕರ್ತರು ನಾಗರಾಜ್ ಗೌಡಗೆ ಟಿಕೆಟ್ ಕೊಡಬೇಕು, ಗೋಣಿ ಮಾಲತೇಶ್ ಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಮುಂಡಾಮೋಚ್ತು. ವಿಜಯೇಂದ್ರ ಗೆಲ್ಲಿಸೋಕೆ ಹೋಗಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇಂದು ಇನ್ನೊಂದು ಗುಂಪು ಆಗಮಿಸಿ ಗೋಣಿ ಮಾಲತೇಶ್ಗೆ ಟಿಕೆಟ್ ಕೊಡುವಂತೆ ಸಿದ್ದರಾಮಯ್ಯ ನಿವಾಸದ ಮುಂದೆ ಆಗ್ರಹಿಸಿ ಪ್ರತಿಭಟನೆ ಮಾಡಿದೆ. ನಾಗರಾಜ್ ಗೌಡ ಬೆಂಬಲಿಗರು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಜಯೇಂದ್ರ ವಿರುದ್ಧ ಸ್ಪರ್ಧೆಗೆ ಗೋಣಿ ಮಾಲತೇಶ್ ಅವರೇ ಸೂಕ್ತ ಎಂದು ವಾದ ಮಾಡಿದರು.
ಗೋಣಿ ಮಾಲತೇಶ್ ಬೆಂಬಲಿಗರಿಂದ ಗಂಭೀರ ಆರೋಪ ಕೇಳಿಬಂದಿದ್ದು, ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡವರು ಯಾರೂ ಅನ್ನೋ ದಾಖಲೆ ಇದೆ. ಬಿಜೆಪಿಯಲ್ಲಿದ್ದು ಕೆಲಸ ಮಾಡಿ ಈಗ ಇಲ್ಲಿಗೆ ಬಂದವರು ನಾಗರಾಜ್ ಗೌಡ. ಶಿಕಾರಿಪುರ ಜನ ಯಡಿಯೂರಪ್ಪ ಓಕೆ ಅವರ ಮಗ ಯಾಕೆ? ಅಂತ ಕೇಳ್ತಿದ್ದಾರೆ ಎಂದು ವಿವರಿಸುವ ಯತ್ನ ಮಾಡಿದರು.
ಸಿದ್ದರಾಮಯ್ಯ ಮನೆ ಸಮೀಪ ಗೋಣಿ ಮಾಲತೇಶ್ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ನಾಯಕರು. ಶಿಕಾರಿಪುರ ಟಿಕೆಟ್ ನಮಗೆ ಕೊಡಿ ಎಂದು ಕೇಳಲು ಬಂದಿದ್ದೇನೆ. ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಯಡಿಯೂರಪ್ಪ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುವ ದುರ್ಗತಿ ನನಗೆ ಬಂದಿಲ್ಲ. ಅಂತ ದುರ್ಗತಿ ಕಾಂಗ್ರೆಸ್ಗೂ ಬಂದಿಲ್ಲ. ಕಳೆದ ಚುನಾವಣೆಯಲ್ಲೂ ಅದೇ ರೀತಿ ಹೇಳಿದರು. ಆದರೆ ನಾನು 50 ಸಾವಿರ ವೋಟ್ ತೆಗೆದುಕೊಂಡಿದ್ದೆ. ಶಿಕಾರಿಪುರದಲ್ಲಿ 10 ಜನ ಆಕಾಂಕ್ಷಿಗಳು ಇದ್ದಾರೆ.
ಪಕ್ಷ ಯಾರಿಗೆ ಟಿಕೆಟ್ ಕೊಡುತ್ತಾರೆ ಎಂದು ನೋಡೋಣ. ಯಾರಿಗೆ ಟಿಕೆಟ್ ಕೊಟ್ಟರು ಪಕ್ಷಕ್ಕಾಗಿ ದುಡಿಯುತ್ತೇನೆ. ನಾನು ಟಿಕೆಟ್ಗಾಗಿ ಅಪ್ಲಿಕೇಶನ್ ಹಾಕಿದ್ದೇನೆ ಅಷ್ಟೇ. ಪಕ್ಷಕ್ಕಾಗಿ ನಾವು ದುಡಿಯುತ್ತೇವೆ, ಯಾರಿಗೂ ಕೊಟ್ಟರೂ ದುಡಿಯುತ್ತೇನೆ. ಯಡಿಯೂರಪ್ಪ ಹಿರಿಯ ನಾಯಕರು, ನಾಲ್ಕು ಭಾರೀ ಸಿಎಂ ಆಗಿದ್ದಾರೆ. ಅವರು ಮಾಡಬೇಕಾದ ಅಭಿವೃದ್ಧಿ ಮಾಡಿದ್ದಾರೆ. ಯಡಿಯೂರಪ್ಪ ಮಗ ವಿಜಯೇಂದ್ರ ಕೊಡುಗೆ ನಮ್ಮ ಕ್ಷೇತ್ರಕ್ಕೆ ಏನೂ ಇಲ್ಲ. ನಾವು ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿಲ್ಲ, ಬಿಜೆಪಿ ವಿರುದ್ಧ ಮಾತನಾಡುತ್ತಿದ್ದೇವೆ ಎಂದರು.
ಮುಂದುವರೆದು, ಯಾರು ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮದವರು ಹೇಳಬೇಕು. ನಾಮಿನೇಷನ್ ಹಾಕಲು ಹೋದಾಗ ಕಳೆದ ಭಾರೀ 20 ಸಾವಿರ ಜನ ಬಂದಿದ್ದರು. ನನಗೆ ಕಳೆದ ಬಾರೀ ಬಿದ್ದ ವೋಟ್ ಸಿದ್ದರಾಮಯ್ಯ ಮಾಡಿದ ಅಭಿವೃದ್ಧಿ ಮೇಲೆ. ಸುದ್ದಿ ಮಾಧ್ಯಮದವರು ನಮ್ಮನ್ನು ದುರ್ಬಲ ಅಂತ ಹೇಳುತ್ತಾರೆ. ನೋಡೋಣ ವೋಟ್ ಬಿದ್ದಾಗ ಯಾರು ದುರ್ಬಲ ಎಂದು ಗೊತ್ತಾಗುತ್ತೆ. ಯಡಿಯೂರಪ್ಪ ಮಗನನ್ನು ಸೋಲಿಸಲು ಜನರ ತೀರ್ಮಾನ ಮಾಡಿದ್ದಾರೆ. ಯಡಿಯೂರಪ್ಪ ಓಕೆ ಅವರ ಮಗ ಯಾಕೆ ಎಂದು ಕೇಳುತ್ತಿದ್ದಾರೆ. ದಯವಿಟ್ಟು ಮಾಧ್ಯಮದವರು ಗೊಂದಲಕ್ಕೆ ಎಡೆಮಾಡಿಕೊಡಬೇಡಿ. ಸಿದ್ದರಾಮಯ್ಯ ಹಾಗೂ ಡಿಕೆಶಿ ಪಕ್ಷದ ಗೆಲುವಿಗಾಗಿ ಸಾಕಷ್ಟು ದುಡಿದಿದ್ದಾರೆ ಎಂದು ಮಾಲತೇಶ್ ಹೇಳಿದರು.
ವಿಶ್ವನಾಥ್ ಭೇಟಿ ಚರ್ಚೆ: ಸಿದ್ದರಾಮಯ್ಯ ನಿವಾಸಕ್ಕೆ ಬಿಜೆಪಿ ಎಮ್ಎಲ್ಸಿ ಎಚ್ ವಿಶ್ವನಾಥ್ ಇಂದು ಭೇಟಿ ನೀಡಿದ್ದರು. ಸಮಾಲೋಚಿಸಿದ ಬಳಿಕ ಸುದ್ದಿಗಾರರ ಜೊತೆ ಕಾಂಗ್ರೆಸ್ನಲ್ಲಿ ಟಿಕೆಟ್ ಬಂಡಾಯ ವಿಚಾರ ಮಾತನಾಡಿ, ಎಲ್ಲಾ ಪಕ್ಷದಲ್ಲೂ ಆಕಾಂಕ್ಷಿಗಳು ಜಾಸ್ತಿ, ಜೆಡಿಎಸ್ ನಲ್ಲೇ ಆಕಾಂಕ್ಷಿಗಳ ಸಂಖ್ಯೆ ಹೆಚ್ಚು ಇದೆ. ಹೀಗಿರುವಾಗ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಸಹಜ. ಇಲ್ಲಿ ನಾಯಕತ್ವ ಬೆಳವಣಿಗೆ ಆಗಲು ಅವಕಾಶ ಇದೆ. ಆಕಾಂಕ್ಷಿಗಳ ಪಟ್ಟಿ ಜಾಸ್ತಿ ಇದೆ ಎಂಬ ಕಾರಣಕ್ಕೆ ಪಕ್ಷದ ಫಲಿತಾಂಶ ನಿರ್ಧಾರ ಆಗಲ್ಲ ಎಂದರು.
ಮುಂದೆ, ಅಮೂಲ್ ರಾಜ್ಯದ ಮಾರುಕಟ್ಟೆ ಪ್ರವೇಶ ವಿಚಾರ ಮಾತನಾಡಿ, ಎಲ್ಲವನ್ನು ಗುಜರಾತ್ಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ನಂದಿನಿ ಕನ್ನಡಿಗರ ಅಸ್ಮಿತೆ. ಸಾಕಷ್ಟು ಕುಟುಂಬ ಬದುಕುತ್ತಿದೆ ಇದರಿಂದ. ಅದನ್ನು ತೆಗೆದುಕೊಂಡು ಗುಜರಾತ್ಗೆ ಅಡ ಇಟ್ಟರೆ ಯಾರೂ ಒಪ್ಪಲ್ಲ. ಒಂದು ದೇಶ ಒಂದು ಹಾಲು ಒಂದು ಕುರಿ ಎನ್ನುತ್ತಾರೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಸಿಎಂ ಸಿಟಿ ರೌಡಿ ತರ ಮಾತನಾಡಿದರೆ ಪರವಾಗಿಲ್ಲ. ಗಲ್ಲಿ ರೌಡಿ ತರ ಮಾತನಾಡುತ್ತಿದ್ದಾರೆ. ಎಂತೆಂಥ ಸಿಎಂನ್ನು ರಾಜ್ಯ ಕಂಡಿದೆ. ಅವರಾರು ಈ ರೀತಿಯಲ್ಲಿ ಮಾತನಾಡಿಲ್ಲ. ಸಿಎಂ ಸ್ಥಾನದ ಘನತೆ ಗೌರವ ಇಲ್ಲದಾಗಿದೆ ಇವತ್ತು. ಧಮ್ಮು, ತಾಕತ್ತು ಗಂಡಸ್ಥನದ ಬಗ್ಗೆ ಮಾತನಾಡುತ್ತಾರೆ, ಇದು ಶೇಮ್. ರಾಜಕಾರಣಿಗಳು ಹೀಗೆಲ್ಲಾ ಮಾತನಾಡಬಾರದು ವಾಗ್ದಾಳಿ ನಡೆಸಿದರು.
ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಉತ್ತರ ನೀಡಿ, ವರುಣಾದಲ್ಲಿ ಯಾವುದೇ ಮ್ಯಾಚ್ ಫಿಕ್ಸಿಂಗ್ ಆಗಿಲ್ಲ, ಎಲ್ಲಾ ಸುಳ್ಳು. ಕುಮಾರಸ್ವಾಮಿ ಕುಟುಂಬದಲ್ಲಿ ಮ್ಯಾಚ್ ಫಿಕ್ಸಿಂಗ್ ಆಗ್ತಿಲ್ವೇ? ಹಾಗೆಲ್ಲಾ ಕುಮಾರಸ್ವಾಮಿ ಮಾತನಾಡಬಾರದು. ಬಾಂಬೆ ಡೈರಿ ಪುಸ್ತಕ ಬಿಡುಗಡೆ ವಿಚಾರಕ್ಕೆ ಬುಟ್ಟಿಯಲ್ಲಿ ಸರಿಯಾದ ಹಾವು ಇದೆ ಎಂದು ಹೆಚ್ ವಿಶ್ವನಾಥ್ ಹೇಳಿದರು.
ಇದನ್ನೂ ಓದಿ: ಸಿ ರಾಜಗೋಪಾಲಾಚಾರಿ ಮೊಮ್ಮಗ ಸಿಆರ್ ಕೇಶವನ್ ಬಿಜೆಪಿ ಸೇರ್ಪಡೆ