ಬೆಂಗಳೂರು: ಸ್ನೇಹಿತೆಯ ಮೇಲಿನ ಆತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಹನ್ಸೂರ್ ರೆಹಮಾನ್ ಪೊಲೀಸರ ವಿಚಾರಣೆ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಾಗಲೇ ಯುವತಿ ಪ್ರಜ್ಞಾಹೀನರಾಗಿದ್ದಳು. ನಾನು ಆಕೆಯನ್ನು ಕೊಲೆ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾನೆ.
'ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಾಗಲೇ ಸ್ನೇಹಿತೆ ಪ್ರಜ್ಞಾಹೀನಳಾದಳು. ಇದರಿಂದ ನನಗೆ ಭಯವಾಯಿತು. ಕೂಡಲೇ ನೆರೆಹೊರೆಯವರ ಸಹಕಾರದಿಂದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದೆ. ವೈದ್ಯರು ತಪಾಸಣೆ ನಡೆಸಿ ಮಾರ್ಗ ಮಧ್ಯೆಯೇ ಆಕೆ ಯುವತಿ ಮೃತಪಟ್ಟಿದ್ದಾಳೆ ಎಂದರು. ಹೀಗಾಗಿ ನಾನು ಕೊಲೆ ಮಾಡಿಲ್ಲ' ಎಂದು ಹೇಳಿದ್ದಾನೆ.
ಯುವತಿಯ ಮೃತದೇಹದ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಗಿದೆ. ವೈದ್ಯಕೀಯ ವರದಿ ಆಧಾರದಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಆಧಿಕಾರಿಯೊಬ್ಬರು ತಿಳಿಸಿದ್ದಾರೆ.
ಓದಿ: ಕಾಲೇಜು ಶುಲ್ಕ ಕಟ್ಟಲು ಬಂದ ಯುವತಿ ಮೇಲೆ ಅತ್ಯಾಚಾರ, ಕೊಲೆ
ಪ್ರಕರಣದ ಹಿನ್ನೆಲೆ:
ಆರೋಪಿ ವ್ಯಾಸಂಗ ಮಾಡುತ್ತಿದ್ದ ಖಾಸಗಿ ಕಾಲೇಜಿನಲ್ಲಿ ಮೃತ ಯುವತಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಕಳೆದ ಮಂಗಳವಾರ ಊರಿನಿಂದ ಬಂದು ಕಾಲೇಜಿಗೆ ದಾಖಲಾಗಿದ್ದಳು. ಈ ವೇಳೆ, ತನಗೆ ಪರಿಚಯವಿದ್ದ ಸ್ನೇಹಿತನಿಗೆ ಕರೆ ಮಾಡಿದ್ದಾಳೆ. ವಿಜಯನಗರದ ತನ್ನ ರೂಂಗೆ ಬರುವಂತೆ ಯುವತಿಗೆ ಆರೋಪಿ ಸೂಚಿಸಿದ್ದಾನೆ. ಬಳಿಕ ರೂಂಗೆ ಹೋದ ವಿದ್ಯಾರ್ಥಿನಿ ಮೇಲೆ ಆರೋಪಿ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ. ಬಳಿಕ ಅದೇ ಕಟ್ಟಡದ ಕೆಳ ಮಹಡಿಗೆ ಬಂದು ತನ್ನ ಸ್ನೇಹಿತೆ ಪ್ರಜ್ಞೆ ಕಳೆದುಕೊಂಡಿದ್ದಾಳೆ ಎಂದು ಹೇಳಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಷ್ಟರಲ್ಲೇ ವಿದ್ಯಾರ್ಥಿನಿ ಮೃತಪಟ್ಟಿದ್ದು, ಅನುಮಾನಗೊಂಡ ಆಸ್ಪತ್ರೆಯ ಸಿಬ್ಬಂದಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.