ಬೆಂಗಳೂರು/ಹೊಸಕೋಟೆ: ರಮೇಶ್ ಕುಮಾರ್ ಅವರು ಚಿಕ್ಕಂದಿನಿಂದಲೂ ನನ್ನ ಎತ್ತಿ ಆಡಿಸಿದವರು. ಅವರು ನಮ್ಮ ತಂದೆಗೆ ತುಂಬಾ ಆಪ್ತರು. ಹೀಗಾಗಿ ಚುನಾವಣೆಯಲ್ಲಿ ಗೆದ್ದ ಬಳಿಕ ಅವರನ್ನು ಭೇಟಿ ಮಾಡಲಾಗಿದೆ ಎಂದು ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶರತ್, ರಮೇಶ್ ಕುಮಾರ್ ಯಾರಿಗೆ ಏನೇ ಆದರೂ ನಮಗೆ ಮಾತ್ರ ಅವರು ಕುಟುಂಬ ಸದಸ್ಯರು ಎಂದರು.
ಕಾಂಗ್ರೆಸ್ ಸೇರ್ಪಡೆ ಆಹ್ವಾನ ಕುರಿತು ಅವರ ಬಳಿ ಏನನ್ನೂ ಚರ್ಚಿಸಿಲ್ಲ. ಭೇಟಿ ವೇಳೆ ಸದನದ ಬಗ್ಗೆ ತಿಳಿದುಕೊಳ್ಳಲು ಅವರು ಎರಡು ಪುಸ್ತಕಗಳನ್ನ ನೀಡಿದ್ದಾರೆ. ಜೀವನದಲ್ಲಿ ಯಾವಾಗಲೂ ನಗು ಇರಬೇಕು ಅನ್ನೋ ಬಗ್ಗೆ ಒಂದು ಪುಸ್ತಕ ನೀಡಿ ಪ್ರೋತ್ಸಾಹಿಸಿದ್ದಾರೆ. ಯಾವಾಗಲೂ ತಂದೆ ಮತ್ತು ತಾತನ ಗೌರವ ಉಳಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದರು.
ಕೃಷ್ಣ ಬೈರೇಗೌಡ ಅಥವಾ ಡಿ ಕೆ ಶಿವಕುಮಾರ್ ಅವರನ್ನು ನೇರವಾಗಿ ಭೇಟಿಯಾಗಿಲ್ಲ. ಗೆದ್ದು 5 ದಿನ ಆಗಿದೆ ಸದ್ಯಕ್ಕೆ ತುರ್ತಾಗಿ ಯಾವ ಪಕ್ಷ ಸೇರಬೇಕು ಎಂಬ ಆತುರ ನನ್ನಲ್ಲಿಲ್ಲ. ಎರಡು ಮೂರು ದಿನಗಳಲ್ಲಿ ಸಿಎಂ ಭೇಟಿಯಾಗಿ ಅವರ ಆಶೀರ್ವಾದ ಪಡೆದುಕೊಂಡು ಬರುವೆ. ಸೋಮವಾರ ಎಲ್ಲಾ 15 ಶಾಸಕರು ಪ್ರಮಾಣವಚನ ಸ್ವೀಕರಿಸುವ ಸಾಧ್ಯೆತೆಯಿದೆ ಎಂದು ಶರತ್ ಇದೇ ವೇಳೆ ತಿಳಿಸಿದರು.