ಬೆಂಗಳೂರು: ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಟಿಕೆಟ್ಗಾಗಿ ಲಾಬಿ ಶುರುವಾಗಿದೆ. ಅಂತೆಯೇ ಹೊಸಕೋಟೆ ಟಿಕೆಟ್ಗಾಗಿ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಶರತ್ ಬಚ್ಚೇಗೌಡ, ತಮ್ಮ ಬೆಂಬಲಿಗರ ಮೂಲಕ ಸಿಎಂ ಯಡಿಯೂರಪ್ಪ ಮೇಲೆ ಒತ್ತಡ ಹೇರುತ್ತಿದ್ದಾರೆ. ಇನ್ನೊಂದೆಡೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಕೂಡ ಟಿಕೆಟ್ ಕೈತಪ್ಪದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಬಚ್ಚೇಗೌಡ ಮತ್ತು ಸಿಎಂ ಮಾತುಕತೆ ನಡೆಸಿದ್ದರು. ಅವರು ಹೊಸಕೋಟೆಯಿಂದ ಬಿಜೆಪಿ ಟಿಕೆಟ್ ಎಂ.ಟಿ.ಬಿ ಗೆ ಅನ್ನುತ್ತಿರುವ ಹಿನ್ನೆಲೆಯಲ್ಲಿ ಶರತ್ ಬಚ್ಚೇಗೌಡ ಅಸಮಾಧಾನಗೊಂಡಿದ್ದು, ಉಪ ಚುನಾವಣೆ ಟಿಕೆಟ್ಗಾಗಿ ಲಾಬಿ ಶುರು ಮಾಡಿದ್ದಾರೆ. ಇದರ ಭಾಗವಾಗಿ ಇಂದು ಶರತ್ ಬಚ್ಚೇಗೌಡ ಬೆಂಬಲಿಗರು ಸಿಎಂ ನಿವಾಸ ಧವಳಗಿರಿಗೆ ಬಂದು ಟಿಕೆಟ್ಗಾಗಿ ಪಟ್ಟುಹಿಡಿದಿದ್ದಾರೆ. ಅಲ್ಲದೆ, ಬೆಂಬಲಿಗರ ಮೂಲಕ ಒತ್ತಡ ತಂತ್ರಕ್ಕೆ ಶರತ್ ಬಚ್ಚೇಗೌಡ ಮುಂದಾಗಿದ್ದಾರೆ.
ಬೆಳಗ್ಗೆ ಹೊಸಕೋಟೆಯಿಂದ ಆಗಮಿಸಿದ ಶರತ್ ಬಚ್ಚೇಗೌಡ ಬೆಂಬಲಿಗರು ಬಿಎಸ್‌ವೈ ನಿವಾಸಕ್ಕೆ ಭೇಟಿ ತೆರಳಿದ್ರು. ಈ ವೇಳೆ ಬೆಂಬಲಿಗರನ್ನ ರಸ್ತೆಯಲ್ಲೇ ತಡೆದ ಪೊಲೀಸರು ಸಿಎಂ ನಿವಾಸಕ್ಕೆ ಅನುಮತಿ ನಿರಾಕರಿಸಿದರು. ಆಗ ಸಿಎಂ ಯಡಿಯೂರಪ್ಪ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಶರತ್ ಬೆಂಬಲಿಗರು, ಶರತ್ಗೆ ಟಿಕೆಟ್ ನೀಡುವಂತೆ ಆಗ್ರಹಿಸಿದರು. ರಸ್ತೆಯಲ್ಲೇ ಧರಣಿ ನಡೆಸುವ ಎಚ್ಚರಿಕೆ ನೀಡಿದಾಗ ಐವರಿಗೆ ಮಾತ್ರ ಬಿಎಸ್‌ವೈ ಮನೆ ಒಳಗೆ ಹೋಗಲು ಅವಕಾಶ ನೀಡಲಾಯಿತು. ಸಂಸದ ಬಚ್ಚೇಗೌಡ ಸಹೋದರ ಗೋಪಾಲಗೌಡ, ಹೋಸಕೋಟೆ ಬಿಜೆಪಿ ಅಧ್ಯಕ್ಷ, ಹೊಸಕೋಟೆ ಗ್ರಾಮಾಂತರ ಬಿಜೆಪಿ ಅಧ್ಯಕ್ಷರ ನೇತೃತ್ವದ ನಿಯೋಗ ಸಿಎಂ ಭೇಟಿ ಮಾಡಿ ಶರತ್ ಬಚ್ಚೇಗೌಡರಿಗೆ ಈ ಬಾರಿಯೂ ಟಿಕೆಟ್ ನೀಡುವಂತೆ ಮನವಿ ಸಲ್ಲಿಸಿತು.
ಸಿಎಂ ಮುಂದೆ ಕೈ ಚಲ್ಲಿದ ಬಚ್ಚೇಗೌಡ:
ಇನ್ನು ಉಪಚುನಾವಣೆ ಸಂಬಂಧ ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೊತೆ ಸಂಸದ ಬಚ್ಚೇಗೌಡ ಮಾತುಕತೆ ನಡೆಸಿದರು. ಹೊಸಕೊಟೆ ಟಿಕೆಟ್ಗಾಗಿ ನನ್ನ ಮಗ ಪಟ್ಟು ಹಿಡಿದಿದ್ದು, ನಮ್ಮ ಮಾತು ಸಹ ಕೇಳುತ್ತಿಲ್ಲ. ಬಿಜೆಪಿಯಿಂದ ಟಿಕೇಟ್ ಸಿಗದಿದ್ದರೆ ಪಕ್ಷೇತರನಾಗಿ ನಿಲ್ಲೋದಾಗಿ ಹೇಳುತ್ತಿದ್ದಾನೆ. ಹಾಗಾಗಿ ನನ್ನಿಂದಲೂ ಅವನನ್ನ ಸಮಾಧಾನಪಡಿಸಲು ಆಗುತ್ತಿಲ್ಲವೆಂದು ಸಿಎಂ ಮುಂದೆ ಸಂಸದ ಬಚ್ಚೇಗೌಡ ಅಸಹಾಯಕತೆ ವ್ಯಕ್ತಪಡಿಸಿದರು ಎಂದು ಹೇಳಲಾಗ್ತಿದೆ.
ಎಂಟಿಬಿಯಿಂದಲೂ ಲಾಬಿ:
ಬೆಳ್ಳಂಬೆಳಗ್ಗೆ ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ದೌಡಾಯಿಸಿದ್ದರು. ಶರತ್ ಬಚ್ಚೇಗೌಡ ಸ್ಪರ್ಧೆಗೆ ಒತ್ತಡ ಹೆಚ್ಚಾಗುತ್ತಿದ್ದಂತೆ ದೌಡಾಯಿಸಿದ್ದ ಎಂಟಿಬಿ ಅವರು, ಸಿಎಂ ಯಡಿಯೂರಪ್ಪ ಜೊತೆ ಚರ್ಚಿಸಿದರು.
ಪೊಲೀಸ್ ಸರ್ಪಗಾವಲು:
ಬಿಎಸ್‌ವೈ ನಿವಾಸಕ್ಕೆ ಶರತ್ ಬಚ್ಚೇಗೌಡ ಬೆಂಬಲಿಗರ ದಂಡು ಆಗಮಿಸುವ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು. ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್‌ವೈ ಮನೆ ಸುತ್ತಮುತ್ತಲೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.