ಹೊಸಕೋಟೆ: ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ಗೆ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಫೆ. 25ರಂದು ಬೆಳಗ್ಗೆ 11 ಗಂಟೆಗೆ ಹಿರಿಯ ನಾಯಕರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಫೆ. 25ರಂದು ಕಾಂಗ್ರೆಸ್ಗೆ ಸೇರಲಿದ್ದಾರೆ. ಇದೇ ವೇಳೆ ಶರತ್ ಬಚ್ಚೇಗೌಡರ ಅಪಾರ ಬೆಂಬಲಿಗರು ಹಾಗೂ ಕ್ಷೇತ್ರದ ಆಪ್ತ ಮುಖಂಡರು ಕೂಡ ನೇರವಾಗಿ ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ.
ಶರತ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಿಂದ ಎಂಟಿಬಿ ನಾಗರಾಜ್ ವಿರುದ್ಧ ಬಿಜೆಪಿಯಿಂದ ಟಿಕೆಟ್ ಪಡೆದು ಸ್ಪರ್ಧಿಸಿ ಸೋತಿದ್ದರು. ಆದರೆ ರಾಜ್ಯದಲ್ಲಿ ಉಂಟಾದ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹೊಸಕೋಟೆ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿತ್ತು. ಈ ಸಂದರ್ಭದಲ್ಲಿ ಮತ್ತೆ ಬಿಜೆಪಿಯಿಂದ ಟಿಕೆಟ್ ನಿರೀಕ್ಷೆ ಮಾಡಿದ್ದ ಶರತ್ಗೆ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು, ಬಿಜೆಪಿಯಿಂದ ಸ್ಪರ್ಧಿಸಿದ್ದ ಎಂಟಿಬಿ ನಾಗರಾಜ್ ಅವರನ್ನ ಸೋಲಿಸಿ ಗೆಲುವು ಸಾಧಿಸಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಚ್ಚೇಗೌಡ ಬಿಜೆಪಿ ಸಂಸದರಾಗಿದ್ದಾರೆ, ಮತ್ತೊಂದು ಕಡೆ ಹೊಸಕೋಟೆ ತಾಲೂಕಿನಲ್ಲಿ ಬಚ್ಚೇಗೌಡರ ಮಗ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರುತ್ತಿದ್ದಾರೆ. ಒಂದು ಕಡೆ ಬಿಜೆಪಿಯಲ್ಲಿ ತಂದೆ, ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷದಲ್ಲಿ ಮಗ ಅಧಿಕಾರ ನಡೆಸಲಿದ್ದಾರೆ. ಸದ್ಯ ಹೊಸಕೋಟೆ ತಾಲೂಕಿನ ಪ್ರಮುಖ ಸ್ಥಳಗಳಲ್ಲಿ ಕಾಂಗ್ರೆಸ್ ಸೇರುವ ಬಗ್ಗೆ ದೊಡ್ಡ ದೊಡ್ಡ ಬ್ಯಾನರ್ಗಳನ್ನು ಹಾಕಿದ್ದಾರೆ.