ಬೆಂಗಳೂರು: ಬಿಜೆಪಿ ನೂತನ ಶಾಸಕ ಶರಣು ಸಲಗರ್ ಪ್ರಮಾಣ ವಚನ ಸ್ವೀಕಾರಕ್ಕೆ ಮುನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾಲಿಗೆ ಬಿದ್ದು, ದೀರ್ಘದಂಡ ನಮಸ್ಕಾರ ಹಾಕಿ ಆಶೀರ್ವಾದ ಪಡೆದುಕೊಂಡರು.
ಸಿಎಂ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ಶರಣು ಸಲಗರ್ ಯಡಿಯೂರಪ್ಪ ಅವರನ್ನು ಭೇಟಿಯಾದರು. ಸಿಎಂ ಎದುರಾಗುತ್ತಿದ್ದಂತೆ ಸಾಷ್ಟಾಂಗ ನಮಸ್ಕಾರ ಮಾಡಿ ಆಶೀರ್ವಾದ ಪಡೆದುಕೊಂಡರು. ನಂತರ ಸಿಎಂಗೆ ಹೂಗುಚ್ಚ ನೀಡಿದರು.
ನೂತನ ಶಾಸಕ ಸಲಗರ್ಗೆ ಶುಭ ಕೋರಿದ ಸಿಎಂ, ಬಸವಕಲ್ಯಾಣ ಕ್ಷೇತ್ರದ ಜನತೆ ಆಶೀರ್ವಾದ ಮಾಡಿದ್ದು, ಅವರು ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಬೇಕು. ಕ್ಷೇತ್ರದಲ್ಲಿಯೇ ಇದ್ದು ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಬೇಕು, ಕ್ಷೇತ್ರದ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಯಡಿಯೂರಪ್ಪ ಸಲಹೆ ಪಡೆದ ಶರಣು ಸಲಗರ್, ಪಕ್ಷ ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುತ್ತೇನೆ. ಜನಪರ ಕೆಲಸ ಕಾರ್ಯದಲ್ಲಿ ತೊಡಗುತ್ತೇನೆ ಎಂದು ಭರವಸೆ ನೀಡಿದರು.
ನಂತರ ವಿಧಾನಸೌಧಕ್ಕೆ ತೆರಳಿದ ಶರಣು ಸಲಗರ್, ಮೆಟ್ಟಿಲುಗಳಿಗೆ ನಮಸ್ಕರಿಸಿ ಪ್ರವೇಶ ಮಾಡಿ ಗಮನ ಸೆಳೆದರು. ಮೊದಲ ಬಾರಿ ಶಾಸನ ಸಭೆಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವದ ದೇವಾಲಯವಾಗಿರುವ ವಿಧಾನಸೌಧಕ್ಕೆ ನಮಸ್ಕರಿಸಿ ಪ್ರವೇಶಿಸುತ್ತಿದ್ದು ಪ್ರಜಾಪ್ರಭುತ್ವ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳುವುದಾಗಿ ತಿಳಿಸಿದರು.