ಬೆಂಗಳೂರು : ಭೂಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಸುಗ್ರೀವಾಜ್ಞೆ ತರುವ ಮೂಲಕ ಸರ್ಕಾರ ಕೃಷಿ ಭೂಮಿಯನ್ನ ಬಂಡವಾಳಶಾಹಿಗಳಿಗೆ ಕಿತ್ತುಕೊಡುವ ಅವಸರದಲ್ಲಿದೆ ಎಂದು ತೋರುತ್ತದೆ ಎಂದು ನಮ್ಮೂರ ಭೂಮಿ ನಮಗಿರಲಿ ಆಂದೋಲನದ ಸದಸ್ಯೆ ಶಾರದಾ ಗೋಪಾಲ್ ಹೇಳಿದರು.
ಈಟಿವಿ ಭಾರತ್‌ಗೆ ಸಂದರ್ಶನ ನೀಡಿದ್ದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಭೂಸುಧಾರಣಾ ಕಾಯ್ದೆ ವಿರುದ್ಧ ಮಾತನಾಡುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದರು.
ಅದಕ್ಕೆ ಪ್ರತಿಕ್ರಿಯೆ ನೀಡಿದ ಶಾರದಾ ಗೋಪಾಲ್ ಅವರು, ಯಾವ ಜನ ನಿಮ್ಮನ್ನ ಆಯ್ಕೆ ಮಾಡಿದ್ದಾರೆಯೋ ಅವರದೇ ಭೂಮಿಯನ್ನ ಕಿತ್ತು ಬಂಡವಾಳಶಾಹಿಗಳಿಗೆ ಕೊಡುವುದಕ್ಕೆ ಮುಂದಾಗಿರುವ ಇವರು, ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.
108 ಎಕರೆಗಿಂತ ಹೆಚ್ಚು ಭೂಮಿ ಖರೀದಿಗೆ ಅರ್ಜಿ ಅಗತ್ಯ ಎಂದು ಸಚಿವರು ಹೇಳಿದ್ದರು. ಆದರೆ, ಶಾರದಾ ಅವರು ಹೇಳುವ ಪ್ರಕಾರ 63 ಕಲಂ ತಿದ್ದುಪಡಿ ಪ್ರಕಾರ 5 ಜನಕ್ಕಿಂತ ಹೆಚ್ಚಿರುವ ಕುಟುಂಬಗಳು 20 ಯೂನಿಟ್ಗೂ ಹೆಚ್ಚು ಭೂಮಿ ಖರೀದಿಸಬಹುದು. ಗೇಣಿದಾರಿಗೆ 432 ಯೂನಿಟ್ ಭೂಮಿ ಜಾಗ ಖರೀದಿಸಬಹುದು ಎಂದು ಕಾನೂನು ಇದೆ ಎಂದರು. ಬೆಂಗಳೂರು ಸುತ್ತಮುತ್ತ ಪುಷ್ಪ ಕೃಷಿ ಹಾಗೂ ಜಲ ಕೃಷಿಗೆ ಸಣ್ಣ ರೈತರಿಂದ ಭೂಮಿ ಪಡೆದ ಗೇಣಿದಾರರು ಈಗ ಉದ್ಯಮಿಗಳಾಗಿದ್ದಾರೆ. ಸರ್ಕಾರ ತಿದ್ದುಪಡಿಯ ಪ್ರಕಾರ ಹೆಚ್ಚು ಭೂಮಿ ಖರೀದಿಸಲು ಅವಕಾಶ ನೀಡುತ್ತದೆ ಎಂದರು.
ಸರ್ಕಾರ ಬಂಡವಾಳಶಾಹಿ ಪರವಾಗಿದೆ. ಕೃಷಿ ಭೂಮಿ ಒಬ್ಬ ಗಂಡಸು ರೈತನಿಗೆ ಮಾತ್ರ ಸಂಬಂಧ ಪಟ್ಟದಲ್ಲ, ಕೃಷಿಕಾರ ಹಾಗೂ ಮಹಿಳೆಯರಿದ್ದಾರೆ. ಇವರ ಅಭಿಪ್ರಾಯ ಪಡೆದು ಸಮಾಲೋಚನೆ ನಡೆಸಿ ಇಂತಹ ಕಾನೂನು ತಿದ್ದುಪಡಿ ಮಾಡಬೇಕು ಎಂದು ಸಚಿವರಿಗೆ ಹೇಳಿದರು.