ಬೆಂಗಳೂರು : ಯಡಿಯೂರಪ್ಪ ನಾಯಕತ್ವ ಬದಲಾವಣೆ ಮಾಡದಂತೆ ವಿವಿಧ ಮಠಾಧೀಶರು ಹೇಳಿಕೆ ನೀಡುತ್ತಿದ್ದಾರೆ. ಇದರ ಬೆನ್ನಲ್ಲೇ ಸಿಎಂ ನಿವಾಸಕ್ಕೆ ಕಾಂಗ್ರೆಸ್ ನಾಯಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಭೇಟಿ ನೀಡಿ ಕುತೂಹಲ ಮೂಡಿಸಿದ್ದಾರೆ.
ಸಂಜೆ ಸಿಎಂ ನಿವಾಸಕ್ಕೆ ಆಗಮಿಸಿದ ಶಾಮನೂರು ಶಿವಶಂಕರಪ್ಪ, ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ನಿವಾಸಕ್ಕೆ ಆಗಮಿಸಿದ ಅತಿಥಿಯನ್ನು ಆತ್ಮೀಯವಾಗಿ ಬರಮಾಡಿಕೊಂಡ ಬಿಎಸ್‌ವೈ, ಉಪಹಾರದ ಜೊತೆ ಕೆಲ ಸಮಯ ಚರ್ಚೆ ನಡೆಸಿದರು. ಪ್ರಸಕ್ತ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಮಹಾಸಭಾದ ಕೆಲ ಕೆಲಸಗಳಿಗೆ ಸಂಬಂಧಪಟ್ಟಂತೆ ಮನವಿ ಪತ್ರವನ್ನು ಸಿಎಂಗೆ ನೀಡಲಾಗಿದೆ. ಅವುಗಳಿಗೆ ಸಿಎಂ ಒಪ್ಪಿಗೆ ನೀಡಿ ಪರಿಶೀಲಿಸುವಂತೆ ಸಹಿ ಹಾಕಿದ್ದಾರೆ. ಇದರ ಜೊತೆಯಲ್ಲಿಯೇ ರಾಜಕೀಯದ ಮಾತುಕತೆ ಸಹ ನಡೆಸಲಾಗಿದೆ.
ಯಡಿಯೂರಪ್ಪ ಪರ ಹೇಳಿಕೆ : ವೀರಶೈವ ಪಂಚಪೀಠಗಳಲ್ಲಿ ಒಂದಾದ ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಜಗದ್ಗುರುಗಳು ಯಡಿಯೂರಪ್ಪ ಪರ ನಿಲುವು ವ್ಯಕ್ತಪಡಿಸಿದ್ದಾರೆ. ನಾಯಕತ್ವ ಬದಲಾವಣೆ ಮಾಡದಂತೆ ಅವರು ಹೇಳಿಕೆ ನೀಡಿದ್ದಾರೆ. ಈ ಹಿಂದಿನಿಂದಲೂ ಯಡಿಯೂರಪ್ಪ ಪರ ಹೇಳಿಕೆ ನೀಡುತ್ತಲೇ ಬಂದಿರುವ ಶ್ರೀಗಳು, ಈಗ ಮತ್ತೆ ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ.
ಅದರ ಬೆನ್ನಲ್ಲೇ ಶಾಮನೂರು ಶಿವಶಂಕರಪ್ಪ ಅವರು ಬಿಎಸ್‌ವೈ ಭೇಟಿ ಮಾಡಿರುವುದರಿಂದ ಮಹಾಸಭಾ ಸಿಎಂಗೆ ಬೆಂಬಲ ವ್ಯಕ್ತಪಡಿಸುತ್ತಿದೆ ಎನ್ನಲಾಗುತ್ತಿದೆ. ಈಗಾಗಲೇ ಕಾಂಗ್ರೆಸ್ ನಾಯಕ ಎಂ ಬಿ ಪಾಟೀಲ್ ಕೂಡ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ್ದಾರೆ.
ಪ್ರತ್ಯೇಕ ಲಿಂಗಾಯತ ಧರ್ಮದ ಪರ ಹೋರಾಟ ಮಾಡಿದ್ದ ಎಂ ಬಿ ಪಾಟೀಲ್ ಮತ್ತು ಪ್ರತ್ಯೇಕ ಧರ್ಮದ ವಿರುದ್ಧ ನಿಂತಿದ್ದ ಶಾಮನೂರು ಶಿವಶಂಕರಪ್ಪ ಎರಡೂ ಬಣ ಇದೀಗ ಬಿಎಸ್‌ವೈ ಬೆಂಬಲಕ್ಕೆ ನಿಂತಿರುವುದು ಯಡಿಯೂರಪ್ಪ ಬಲ ಹೆಚ್ಚುವಂತೆ ಮಾಡಿದೆ.
ಓದಿ: ಸಿಎಂಗೆ ವೀರಶೈವ ಮಹಾಸಭಾ ಬೇಷರತ್ ಬೆಂಬಲ ಘೋಷಣೆ.. ಇತಿಹಾಸ ನೆನಪಿಸಿ ಬಿಜೆಪಿಗೆ ಎಚ್ಚರಿಕೆ..