ಬೆಂಗಳೂರು : ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ನಡೆದ ಭಾರಿ ಅವ್ಯಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಬಂಧಿಸಿದ 11 ಜನ ಆರೋಪಿಗಳ ಪೊಲೀಸ್ ಕಸ್ಟಡಿ ಇಂದು ಕೊನೆಗೊಳ್ಳಲಿದ್ದು, ವಿಡಿಯೋ ಕಾನ್ಪರೆನ್ಸ್ ಮೂಲಕ ನ್ಯಾಯಾಲಯದ ಎದುರು ಹಾಜರಾಗಲಿದ್ದಾರೆ.
ಜಾರಿ ನಿರ್ದೇಶನಾಲಯ(ಇಡಿ) ಕೂಡ ಪಿಎಂಎಲ್ಎ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿರುವ ಹಿನ್ನೆಲೆ, ಸಿಐಡಿ ತನಿಖೆ ಮುಕ್ತಾಯಗೊಂಡ ತಕ್ಷಣವೇ ಆರೋಪಿಗಳನ್ನು ಇಡಿ ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಬ್ಯಾಂಕ್ನಲ್ಲಿ ದಾಖಲೆ ಇಲ್ಲದೇ ಕೋಟ್ಯಂತರ ಹಣದ ಅವ್ಯವಹಾರ ನಡೆದಿದ್ದು, ಈ ಹಣದ ಜಾಡನ್ನು ತನಿಖಾಧಿಕಾರಿಗಳು ಬೆನ್ನಟ್ಟಿದ್ದಾರೆ. ಬಂಧಿತ ಆರೋಪಿಗಳಾದ ಶ್ರೀನಿವಾಸ್, ರಾಮಕೃಷ್ಣ, ಕುಮಾರೇಶ್ ಬಾಬು ಡಿ, ಶ್ರೀ ಹರಿಕೃಷ್ಣ, ಶ್ರೀಶಾ ಎಸ್ ಪೊ, ರಮೇಶ್, ಲೋಕೇಶ್, ಪ್ರಸನ್ನ ಕುಮಾರ್, ವಿಜಯ ಸಿಂಹ, ವೆಂಕಟೇಶ್ ಸುಳ್ಳು ದಾಖಲೆ ನೀಡಿ ಕೋಟಿ ಕೋಟಿ ಸಾಲ ಪಡೆದಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಐಡಿ, ಹಲಸೂರು, ರಾಜಾಜಿನಗರ, ಸದಾಶಿವನಗರ, ಜಯನಗರ ಸೇರಿದಂತೆ ಹದಿನೈದು ಕಡೆ ಆರೋಪಿಗಳ ವಹಿವಾಟುಗಳ ಮೇಲೆ ದಾಳಿ ನಡೆಸಿ ಬಂಧಿಸಿತ್ತು.
ಅವ್ಯವಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬ್ಯಾಂಕ್ನ ಮಾಜಿ ಸಿಇಒ ವಾಸುದೇವ್ ಮಯ್ಯ ಮನೆ ಕಚೇರಿ ಹಾಗೂ ಇತರ ಅಧಿಕಾರಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬಳಿಕ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಮಾಜಿ ಸಿಇಒ ವಾಸುದೇವ್ ಮಯ್ಯ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು.