ಬೆಂಗಳೂರು: ಪ್ರತಿಷ್ಠಿತ ಆಸ್ಪತ್ರೆಯ ವೈದ್ಯನೊಬ್ಬ ಮಹಿಳಾ ಟೆಕ್ನಿಷಿಯನ್ ಗೆ ನಿತ್ಯ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ.
ಡಾ. ಪರಮೇಶ್ವರ್ ಎಂಬ ವೈದ್ಯ ಮತ್ತಿಕೆರೆ ಬಳಿ ಖಾಸಗಿ ಆಸ್ಪತ್ರೆಯಲ್ಲಿ ಪೈಲ್ಸ್ ಸರ್ಜರಿ, ಪ್ರೋಟಾಲಜಿಯಲ್ಲಿ ತಜ್ಞನಾಗಿದ್ದು, ಹಲವು ವರ್ಷಗಳಿಂದ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಂತ್ರಸ್ತೆ 2019 ಅಕ್ಟೋಬರ್ 30 ರಂದು ಓಟಿ ಟೆಕ್ನಿಷಿಯನ್ ಆಗಿ ಕೆಲಸಕ್ಕೆ ಸೇರಿದ್ದಳು. ಕೆಲಸಕ್ಕೆ ಸೇರಿದ ಕೆಲ ತಿಂಗಳ ಬಳಿಕ ಪರಮೇಶ್ವರ್ ಸಮಯ ನೋಡಿಕೊಂಡು ಸಂತ್ರಸ್ತೆಯೊಂದಿಗೆ ಅನುಚಿತವಾಗಿ ವರ್ತಿಸಿ ಮುಜುಗರ ಉಂಟು ಮಾಡಿದ್ದಾನೆ. ಅಶ್ಲೀಲವಾಗಿ ಮಾತನಾಡಿ, ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ಕೊಡಲು ಶುರುಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಅಷ್ಟೇಅಲ್ಲದೆ, ಆತ ಕೆಲಸದ ನಿಮಿತ್ತ ದುಬೈಗೆ ತೆರಳಿದ್ದಾಗಲೂ ಆಕೆಗೆ ಪದೇ ಪದೇ ಕರೆ ಮಾಡಿ ಅನಗತ್ಯವಾಗಿ ಮಾತನಾಡುವುದು, ಅಶ್ಲೀಲ ಸಂದೇಶಗಳನ್ನು ಕಳಿಸುವುದು ಮಾಡುತ್ತಿದ್ದ. ಸಂತ್ರಸ್ತೆಯ ಕುತ್ತಿಗೆ ಹಿಡಿದು ಸ್ನಾನದ ಕೋಣೆಗೆ ಕರೆದೊಯ್ದು ಲೈಂಗಿಕವಾಗಿ ಸಹಕರಿಸುವಂತೆ ಕಿರುಕುಳ ನೀಡಿದ್ದಾನೆ. ಈ ವೇಳೆ ಜೋರಾಗಿ ಕಿರುಚಿಕೊಂಡು ಆಕೆ ಅಲ್ಲಿಂದ ಓಡಿದ್ದು, ಈ ವಿಚಾರವನ್ನು ತನ್ನ ಸಹೋದ್ಯೋಗಿಗಳೊಂದಿಗೆ ಹೇಳಿಕೊಂಡಿದ್ದಾಳೆ. ಆಗ ಸಿಬ್ಬಂದಿ ತಮ್ಮೊಂದಿಗೂ ವೈದ್ಯ ಇದೇ ರೀತಿ ನಡೆದುಕೊಂಡಿರುವ ಬಗ್ಗೆ ಹೇಳಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ.
ಹೀಗೆ ಈತ ನಿರಂತರವಾಗಿ ಕಿರುಕುಳ ನೀಡುವ ವಿಚಾರವನ್ನು ಬಾಯ್ಬಿಟ್ಟರೆ ಆಕೆಯ ಜೀವನ ನರಕ ಮಾಡುವುದಾಗಿ ಬೆದರಿಸಿದ್ದಾನೆ ಎನ್ನಲಾಗ್ತಿದೆ. ಆದರೆ, ಮಹಿಳಾ ಟೆಕ್ನಿಶಿಯನ್ ಈ ಕಿರುಕುಳ ತಾಳಲಾರದೆ ಬಸವನಗುಡಿ ಮಹಿಳಾ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.